ಮೋದಿಯ ರಫೇಲ್ ಒಪ್ಪಂದ ‘ಉತ್ತಮವಲ್ಲ’ ಎಂದಿದ್ದ ಸರಕಾರದ ಅಧಿಕೃತ ಸಂಧಾನಕಾರರು

Update: 2019-02-13 08:36 GMT

ಹೊಸದಿಲ್ಲಿ, ಫೆ.13: ರಫೇಲ್ ಒಪ್ಪಂದ ವಿವಾದಕ್ಕೀಡಾದಂದಿನಿಂದ ಸರಕಾರ ಮುಂದಿಟ್ಟಿರುವ ವಾದ ಒಂದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಸರಕಾರದ ನಡುವೆ ಸಹಿ ಹಾಕಲಾದ ಹೊಸ ರಫೇಲ್ ಒಪ್ಪಂದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ಧಪಡಿಸಲಾಗಿದ್ದ ಒಪ್ಪಂದಕ್ಕಿಂತ ಬಹಳಷ್ಟು ಉತ್ತಮವಾಗಿದೆಯಲ್ಲದೆ, ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಬೇಗನೇ ಲಭ್ಯವಾಗಲಿದೆ ಎಂಬುದು ಮೋದಿ ಸರಕಾರದ ವಾದವಾಗಿತ್ತು.

ಆದರೆ 'ದಿ ಹಿಂದು' ಪತ್ರಿಕೆ ಬುಧವಾರ ಪ್ರಕಟಿಸಿದ ವರದಿಯ ಪ್ರಕಾರ ರಫೇಲ್ ಮಾತುಕತೆ ನಡೆಸುತ್ತಿದ್ದ  ಭಾರತದ ಏಳು ಮಂದಿಯ ಅಧಿಕೃತ ತಂಡದ ಕನಿಷ್ಠ ಮೂವರು ಹಿರಿಯ ರಕ್ಷಣಾ ಸಚಿವಾಲಯ ಅಧಿಕಾರಿಗಳು ಸರಕಾರದ ವಾದವನ್ನು  ವಿರೋಧಿಸಿದ್ದರು.

ಎಂ ಪಿ ಸಿಂಗ್, ಸಲಹೆಗಾರರು (ಬೆಲೆ),  ಎ ಆರ್ ಸುಳೆ, ಫೈನಾನ್ಶಿಯಲ್ ಮ್ಯಾನೇಜರ್ (ವಾಯುಸೇನೆ) ಹಾಗೂ ರಾಜೀವ್ ವರ್ಮಾ, ಜಂಟಿ ಕಾರ್ಯದರ್ಶಿ ಮತ್ತು ಅಕ್ವಿಸಿಶನ್ಸ್ ಮ್ಯಾನೇಜರ್ (ವಾಯು ಸೇನೆ) ಇವರೇ ಸರಕಾರದ ವಾದವನ್ನು ಒಪ್ಪದ  ಮೂವರು ಅಧಿಕಾರಿಗಳಾಗಿದ್ದು, ಅವರು ತಮ್ಮ ಅಸಮ್ಮತಿ ಸೂಚಿಸಿ ಟಿಪ್ಪಣಿ ಬರೆದಿದ್ದರು. ಈ ಎಂಟು ಪುಟಗಳ ಟಿಪ್ಪಣಿಯನ್ನು ಫ್ರಾನ್ಸ್ ಜತೆಗಿನ ತಂಡದ ಮಾತುಕತೆಗಳು ಮುಕ್ತಾಯಗೊಂಡ ಒಂದು ತಿಂಗಳ ನಂತರ ಹಾಗೂ ಸೆಪ್ಟೆಂಬರ್ 23, 2016ರಂದು ಅಂತರ-ಸರಕಾರಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕಿಂತ ಮೂರು ತಿಂಗಳುಗಳ ಮುನ್ನ ಬರೆಯಲಾಗಿತ್ತು.

``ಫ್ರಾನ್ಸ್ ಸರಕಾರ ಆಫರ್ ಮಾಡಿದ ಅಂತಿಮ ಬೆಲೆ ಕೂಡ ಉತ್ತಮವೆಂದು ಪರಿಗಣಿಸಲಾಗದು'' ಎಂದು ಅವರ ಟಿಪ್ಪಣಿ ಹೇಳಿತ್ತು. ಒಪ್ಪಂದದಲ್ಲಿ ನಮೂದಿಸಲಾಗಿರುವ 36 ಯುದ್ಧವಿಮಾನಗಳ ಪೈಕಿ ಮೊದಲ 18 ವಿಮಾನಗಳ ಹಸ್ತಾಂತರ ಸಮಯ ಹಳೆಯ ಒಪ್ಪಂದಕ್ಕಿಂತ ಬಹಳ ದೀರ್ಘವಾಗಿತ್ತು'' ಎಂದು ಟಿಪ್ಪಣಿ ತಿಳಿಸಿತ್ತು.

ಕಾಂಗ್ರೆಸ್ ಆಡಳಿತದ ಸಂದರ್ಭದ ಒಪ್ಪಂದದಂತೆ ಮೊದಲ 18 ಯುದ್ಧ ವಿಮಾನಗಳನ್ನು 48 ತಿಂಗಳಲ್ಲಿ ಹಸ್ತಾಂತರಿಸಬೇಕೆಂದಿದ್ದರೆ ಹೊಸ ಒಪ್ಪಂದದಲ್ಲಿ 53 ತಿಂಗಳ ಅವಧಿ ನಿಗದಿ ಪಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಹಾಗೂ ಸಂಸತ್ತಿಗೆ ಈಗಿನ ಸರಕಾರ ನೀಡಿದ ಮಾಹಿತಿ ವಾಸ್ತವಕ್ಕೆ ತದ್ವಿರುದ್ಧವಾಗಿತ್ತು ಎಂಬುದು ಇದರಿಂದ ಸ್ಪಷ್ಟ ಎಂದು ರಫೇಲ್ ಕುರಿತಂತೆ ಕೇಂದ್ರವನ್ನು ಟೀಕಿಸುತ್ತಲೇ ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News