ಶಾಸಕ ಪ್ರೀತಂ ಗೌಡ ಮನೆ ಮೇಲೆ ದಾಳಿ: ಸದನದಲ್ಲಿ ಬಿಜೆಪಿ ಸದಸ್ಯರ ಧರಣಿ
ಬೆಂಗಳೂರು, ಫೆ.13: ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ನಡೆದಿರುವ ದಾಳಿಯ ಘಟನೆಯನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಬುಧವಾರ ಭೋಜನ ವಿರಾಮದ ಬಳಿಕ ಸ್ಪೀಕರ್ ಪೀಠದ ಎದುರಿನ ಬಾವಿಗಿಳಿದು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಆರ್.ಅಶೋಕ್, ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ. 90 ವರ್ಷದ ವೃದ್ಧರ ಮೇಲೆ ಹಲ್ಲೆ ನಡೆದಿದೆ. ಶಾಸಕರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೆದರಿಕೆ ಹಾಕಿ ರಾಜ್ಯ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಶಾಸಕರನ್ನು ಕೋಟ್ಯಂತರ ರೂ. ನೀಡಿ ಖರೀದಿ ಮಾಡಲು ಪ್ರಯತ್ನಿಸುವವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರೀತಂ ಗೌಡ ಮನೆಯವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ತಾಯಿಯನ್ನು ಜೆಡಿಎಸ್ ಕಾರ್ಯಕರ್ತರು ಎಳೆದಾಡಿದ್ದಾರೆ. ಗೂಂಡಾಗಿರಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.
ಸದನದಲ್ಲಿ ಗದ್ದಲದ ವಾತಾವರಣ ಹೆಚ್ಚುತ್ತಿದ್ದಂತೆ ಸ್ಪೀಕರ್ ರಮೇಶ್‌ಕುಮಾರ್, ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.