ಬರ ನಿರ್ವಹಣೆಗೆ ಕೇಂದ್ರದಿಂದ 949 ಕೋಟಿ ರೂ. ಬಿಡುಗಡೆ: ಸಚಿವ ಆರ್.ವಿ.ದೇಶಪಾಂಡೆ

Update: 2019-02-13 12:43 GMT

ಬೆಂಗಳೂರು, ಫೆ.13: ರಾಜ್ಯದಲ್ಲಿ ಎದುರಾಗಿರುವ ಬರ ನಿರ್ವಹಣೆಗಾಗಿ ಕೇಂದ್ರ ಸರಕಾರವು ಮುಂಗಾರು ಬರ ಪರಿಹಾರಕ್ಕಾಗಿ 949.49 ಕೋಟಿ ರೂ.ಮಂಜೂರು ಮಾಡಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. 

ಬುಧವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬರ ನಿರ್ವಹಣೆಗಾಗಿ ಮುಂಗಾರು ಹಂಗಾಮಿನಲ್ಲಿ 2434 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ 2064.30 ಕೋಟಿ ಅನುದಾನಕ್ಕಾಗಿ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಕೇವಲ ಮುಂಗಾರು ಬರ ಪರಿಹಾರಕ್ಕಾಗಿ 949 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಹೇಳಿದರು.

ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವಂತೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹೆಚ್ಚಿನ ನೆರವನ್ನು ಕೋರಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಅವಲೋಕಿಸಲು ನಾಲ್ಕು ವಿಭಾಗೀಯ ಮಟ್ಟದಲ್ಲಿ ರಚಿಸಿದ್ದ ಸಚಿವ ಸಂಪುಟದ ಉಪಸಮಿತಿಗಳಲ್ಲಿ ಇದ್ದ ಅಧಿಕಾರಿಗಳು ಈಗಾಗಲೇ ವರದಿಯನ್ನು ಸಲ್ಲಿಸಿದ್ದಾರೆ ಎಂದರು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಠ 5 ಕೋಟಿಗಳಿಗಿಂತ ಕಡಿಮೆ ಅನುದಾನ ಇರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಬರಪೀಡಿತ 156 ತಾಲೂಕುಗಳಲ್ಲಿನ 327 ಗ್ರಾಮಗಳಿಗೆ 595 ಟ್ಯಾಂಕರ್‌ಗಳ 420 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ 78.90 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಮುಂದಿನ 17 ವಾರಗಳವರೆಗೆ ಸಾಕಾಗಲಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇರದಂತೆ ಮೇವು ಬೆಳೆಯಲು 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು. ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗದ ದಿವಸಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News