ಅತ್ಯಾಚಾರ ಸಂತ್ರಸ್ತರ ಕುರಿತು ಹೇಳಿಕೆ ವಿಚಾರ: ಮಹಿಳೆಯರ ಕ್ಷಮೆಯಾಚಿಸಿದ ಸ್ಪೀಕರ್
ಬೆಂಗಳೂರು, ಫೆ.13: ನಿನ್ನೆ ಸದನದಲ್ಲಿ ಸಾಂದರ್ಭಿಕವಾಗಿ ನಾನು ಅತ್ಯಾಚಾರದ ಸಂತ್ರಸ್ತರ ಕುರಿತು ಪ್ರಸ್ತಾಪಿಸಿದ ವಿಷಯವು ಮಹಿಳೆಯರನ್ನು ಅಗೌರವಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್, ವಿಧಾನಸಭೆಯ ಸದಸ್ಯರಾದ ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ್, ರೂಪಕಲಾ, ಲಕ್ಷ್ಮಿ ಹೆಬ್ಬಾಳ್ಕರ್, ಕನಿಝ್ ಫಾತಿಮಾ, ಸೌಮ್ಯಾರೆಡ್ಡಿ, ವಿನಿಶಾ ನಿರೋ ನನ್ನನ್ನು ಭೇಟಿ ಮಾಡಿ ಚರ್ಚಿಸಿದರು ಎಂದರು.
ಅತ್ಯಾಚಾರದ ಬಗ್ಗೆ ನಾನು ನೀಡಿದ ಹೇಳಿಕೆಯಿಂದ ಅವರ ಮನಸ್ಸಿಗೆ ಬೇಸರವಾಗಿರುವ ಕುರಿತು ಪ್ರಸ್ತಾಪಿಸಿದರು. ಹೆಣ್ಣು ಮಕ್ಕಳ ಮನಸ್ಸಿಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ತಣ್ಣೀರನ್ನು ಆರಿಸಿ ಕುಡಿಯುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸ್ಪೀಕರ್ ಹೇಳಿದರು.
ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ತಿಳಿಸಿದರು.