ಸೂಪರ್ ವೈಸರ್ ಕೊಲೆ ಪ್ರಕರಣ: ನಾಲ್ವರ ಬಂಧನ

Update: 2019-02-13 13:15 GMT

ಬೆಂಗಳೂರು, ಫೆ.13: ಕಬ್ಬಿಣದ ವಸ್ತು ಕಳವು ಮಾಡುತ್ತಿದ್ದವರ ವಿರುದ್ಧ ದೂರು ನೀಡಲು ಮುಂದಾದ ಸೂಪರ್ ವೈಸರ್ ಅನ್ನು ಕೊಲೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ಕಗ್ಗಲೀಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದ ಶರೀಫ್, ಪ್ಯಾರು, ಸುಹೇಲ್ ಅಹ್ಮದ್ ಹಾಗೂ ಇಸ್ಮಾಯಿಲ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಕಗ್ಗಲೀಪುರದ ಕೆರೆಯ ಬಳಿಯ ರಸ್ತೆ ಅಗಲೀಕರಣದ ಸ್ಥಳದಲ್ಲಿ ಕಳೆದ ಫೆ.7 ರಂದು ಅಪರಿಚಿತ ವ್ಯಕ್ತಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿ ತಂದು ಎಸೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ, ಮೃತ ವ್ಯಕ್ತಿ ಆಂಧ್ರಪ್ರದೇಶ ಕಡಪ ಜಿಲ್ಲೆ ಪುಲಿವೆಂದಲ ತಾಲೂಕಿನ ಗಂಗಾರಪುವಂಡ್ಲಪಲ್ಲಿ ಗ್ರಾಮದ ಸಗಿಲಿ ನಾಗೇಶ್ವರರೆಡ್ಡಿ (32) ಎಂದು ತಿಳಿದುಬಂದಿತ್ತು ಎನ್ನಲಾಗಿದೆ.

ಕಗ್ಗಲೀಪುರ ಟೌನ್ ಬೈಪಾಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೀಪ್ ಚಾಲಕನಾಗಿದ್ದ ಶರೀಫ್, ಕಾಮಗಾರಿಗೆ ಬಳಸುವ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಲು ಮತ್ತು ಕೆಲಸಗಾರರು ಉಳಿದುಕೊಳ್ಳಲು ನಿರ್ಮಿಸಿದ್ದ ಶೆಡ್ ಬಳಿ ಹಾಕಿದ್ದ ಸೆಂಟ್ರಿಂಗ್ ಕಬ್ಬಿಣದ ವಸ್ತುಗಳನ್ನು ಪ್ಯಾರು ಎಂಬಾತನೊಂದಿಗೆ ಸೇರಿ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕಳ್ಳತನ ಸಂಬಂಧ ಪೊಲೀಸರಿಗೆ ದೂರು ನೀಡುವುದಾಗಿ ಆರೋಪಿಗಳಿಗೆ ಮೃತ ನಾಗೇಶ್ವರ ರೆಡ್ಡಿ ಎಚ್ಚರಿಕೆ ನೀಡಿದ್ದ. ಇದರಿಂದ ಆಕ್ರೋಶಗೊಂಡು, ಆತನನ್ನು ಕೊಲೆ ಮಾಡಿ, ಮೃತ ದೇಹವನ್ನು ಕಗ್ಗಲೀಪುರ ಕೆರೆಯ ಬಳಿ ತಂದು ಎಸೆದು ಪರಾರಿಯಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳು ಮತ್ತು ಕಳ್ಳತನವಾಗಿದ್ದ ಸುಮಾರು ಮೂರೂವರೆ ಟನ್ ತೂಕದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳ ಸಮೇತ ವಾಹನವನ್ನು ಜಪ್ತಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News