ಬಣ್ಣದ ಕಾರ್ಖಾನೆ ಗೋದಾಮಿನಲ್ಲಿ ಅಗ್ನಿ ಅವಘಡ

Update: 2019-02-13 13:17 GMT

ಬೆಂಗಳೂರು, ಫೆ.13: ಬಣ್ಣ ತಯಾರಿಸುವ ಕಾರ್ಖಾನೆಗೆ ಸೇರಿದ ಗೋದಾಮಿನಲ್ಲಿ ಬುಧವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ಆವರಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ನಗರದ ಹೊರವಲಯದ ಮಾದನಾಯಕನಹಳ್ಳಿ ವ್ಯಾಪ್ತಿಯ ಕುದುರೆಗೆರೆ ಕಾಲನಿ ಸಮೀಪದ ಬೆಂಗಳೂರು ಅಂತರ್‌ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಹಿಂಭಾಗದಲ್ಲಿ ಬಣ್ಣ ತಯಾರು ಮಾಡುವ ಕಾರ್ಖಾನೆಗೆ ಸೇರಿದ ಗೋದಾಮಿನಲ್ಲಿ ತೈಲವನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.

ಬುಧವಾರ ದಿಢೀರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ದಟ್ಟ ಹೊಗೆ ಆವರಿಸಿದೆ. ಸುದ್ದಿ ತಿಳಿದು ಬೆಂಗಳೂರು, ತುಮಕೂರು, ನೆಲಮಂಗಲದಿಂದ ಸುಮಾರು 16 ವಾಹನಗಳಲ್ಲಿ 30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಂಕಿಯಿಂದಾಗಿ ಉಂಟಾದ ದಟ್ಟ ಹೊಗೆ ಸುಮಾರು 10 ಕಿ.ಮೀವರೆಗೂ ಆವರಿಸಿರುವುದು ಕಂಡುಬಂದಿತು. ಈ ಬೆಂಕಿ ಅವಘಡ ಹೇಗೆ ಸಂಭವಿಸಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂಋಉ ದಾಖಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News