ನಿಮ್ಮ ವಸಡುಗಳು ನೋಯುತ್ತಿವೆಯೇ?: ಇಲ್ಲಿವೆ 5 ಸಂಭಾವ್ಯ ಕಾರಣಗಳು

Update: 2019-02-13 13:54 GMT

ನೀವು ಏನಾದರೂ ತಿಂದಾಗ ಅಥವಾ ಹಲ್ಲುಜ್ಜಿದಾಗ ವಸಡುಗಳಲ್ಲಿ ನೋವನ್ನು ಅನುಭವಿಸಿದ್ದೀರಾ? ವಸಡುಗಳು ನೋಯಲು ನಿಖರ ಕಾರಣವೇನಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ವಸಡುಗಳಲ್ಲಿ ನೋವನ್ನುಂಟು ಮಾಡುವ ಹಲವಾರು ಕಾರಣಗಳಿವೆ,ಈ ನೋವು ಸೌಮ್ಯವಾಗಿರಬಹುದು ಅಥವಾ ತೀವ್ರ ಸ್ವರೂಪದ್ದಾಗಿರಬಹುದು.

ವಸಡು ನೋವಿಗೆ ಹಲವು ಕಾರಣಗಳಿವೆಯಾದರೂ ಜಿಂಜಿವೈಟಿಸ್ ಅಥವಾ ವಸಡುಗಳ ಉರಿಯೂತ ಅತ್ಯಂತ ಸಾಮಾನ್ಯ ಕಾರಣವಾಗಿದೆ. ವಸಡು ನೋವಿನ ಸಂಭಾವ್ಯ ಕಾರಣಗಳಿಲ್ಲಿವೆ.

ಜಿಂಜಿವೈಟಿಸ್

ಜಿಂಜಿವೈಟಿಸ್ ಬ್ಯಾಕ್ಟೀರಿಯಾ ಸೋಂಕಿನಿಂದುಂಟಾಗುವ ವಸಡುಗಳ ಉರಿಯೂತವಾಗಿದೆ. ಬ್ಯಾಕ್ಟೀರಿಯಾಗಳ ವೃದ್ಧಿ ಮತ್ತು ಹಲ್ಲುಗಳ ಅಸ್ವಚ್ಛತೆ ಇವು ವಸಡು ನೋವಿಗೆ ಎರಡು ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ವಯಸ್ಸು,ಧೂಮ್ರಪಾನ ಮತ್ತು ಶುಷ್ಕ ಬಾಯಿ ಇವು ಸಾಮಾನ್ಯ ಅಪಾಯದ ಅಂಶಗಳಲ್ಲಿ ಸೇರಿವೆ. ಬಾಯಿಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರಿಂದ,ಪ್ರತಿಬಾರಿ ಊಟದ ಬಳಿಕ ನಿಯಮಿತವಾಗಿ ಹಲ್ಲುಗಳನ್ನುಜ್ಜಿಕೊಳ್ಳುವುದರಿಂದ, ಫ್ಲಾಸಿಂಗ್ ಮತ್ತು ತಂಬಾಕು ವರ್ಜನದ ಮೂಲಕ ವಸಡು ರೋಗವನ್ನು ತಡೆಯಬಹುದು.

►ಓರಲ್ ಹರ್ಪಿಸ್

ಓರಲ್ ಹರ್ಪಿಸ್ ಅಥವ ಬಾಯಿಯ ಸರ್ಪಸುತ್ತು ಸೋಂಕು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್‌ನಿಂದುಂಟಾಗುತ್ತದೆ. ಈ ಸೋಂಕು ಜ್ವರ,ವಸಡು ನೋವು,ಯಾತನಾದಾಯಕ ಬಾಯಿ ಹುಣ್ಣುಗಳು,ವಸಡುಗಳಲ್ಲಿ ಊತ ಮತ್ತು ವಸಡುಗಳು ಕೆಂಪಗಾಗಲು ಕಾರಣವಾಗುತ್ತದೆ. ಇದು ಸಾಂಕ್ರಾಮಿಕವಾಗಿದ್ದು,ಸೋಂಕುಪೀಡಿತ ವ್ಯಕ್ತಿಯ ಸಂಪರ್ಕದಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಅಪರೂಪದ ಕಾಯಿಲೆಯಾಗಿದ್ದು,ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು.

►ಕೋಲ್ಡ್ ಸೋರ್ಸ್‌ ಅಥವಾ ಶೀತಹುಣ್ಣುಗಳು

ಬಾಯಿ ಮತ್ತು ತುಟಿಗಳಲ್ಲಿ ಶೀತಹುಣ್ಣುಗಳು,ಬಿರುಕುಗಳು ಯಾತನಾದಾಯಕವಾಗಬಹುದು ಮತ್ತು ಕಿರಿಕಿರಿಯನ್ನುಂಟು ಮಾಡಬಹುದು. ಇವು ವಯಸ್ಕರಲ್ಲಿ ಕಂಡು ಬರುವ ಸಾಮಾನ್ಯ ದಂತ ಸಮಸ್ಯೆಗಳಾಗಿವೆ. ಇವು ವಸಡುಗಳಲ್ಲಿ ನೋವಿಗೆ ಕಾರಣವಾಗುತ್ತವೆ. ಶೀತಹುಣ್ಣುಗಳಾದಾಗ ವ್ಯಕ್ತಿಗೆ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದೂ ಕಷ್ಟವಾಗಬಹುದು.

►ಒಣಗಿದ ಕುಳಿ

ನಾವು ಹಲ್ಲನ್ನು ಕೀಳಿಸಿಕೊಂಡಾಗ ಮೂಳೆಯಲ್ಲಿ ಕುಳಿಯುಂಟಾಗುತ್ತದೆ. ಸಾಮಾನ್ಯವಾಗಿ ಈ ಕುಳಿಯಲ್ಲಿ ರಕ್ತವು ಹೆಪ್ಪುಗಟ್ಟಿಕೊಂಡು ಕೆಳಗಿರುವ ಮೂಳೆಗೆ ರಕ್ಷಣೆಯನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಈ ರಕ್ತದ ಹೆಪ್ಪು ಕರಗುತ್ತದೆ ಮತ್ತು ತನ್ಮೂಲಕ ಮೂಳೆ ಮತ್ತು ನರಗಳು ನಾವು ಸೇವಿಸುವ ಆಹಾರ, ನೀರು ಮತ್ತು ಗಾಳಿಗೂ ತೆರೆದುಕೊಳ್ಳುತ್ತವೆ. ಈ ಸ್ಥಿತಿಯನ್ನು ಒಣ ಕುಳಿ ಎನ್ನಲಾಗುತ್ತದೆ. ಇದು ಹಲ್ಲು ಕೀಳಿಸಿಕೊಂಡ ಬಳಿಕ ಹೆಚ್ಚಿನ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದ್ದು,ವಸಡುಗಳಲ್ಲಿ ನೋವು, ತಲೆನೋವು, ವಸಡುಗಳ ಊತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ.

►ಹಾರ್ಮೋನ್ ಬದಲಾವಣೆಗಳು

ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳು ಕೂಡ ವಸಡುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದಾಗ ವಸಡುಗಳಿಗೆ ಹೆಚ್ಚಿನ ರಕ್ತ ಹರಿಯುತ್ತದೆ ಮತ್ತು ಅವು ಊದಿಕೊಂಡು ನೋಯತೊಡಗುತ್ತವೆ. ಗರ್ಭಾವಸ್ಥೆಯು ಕೂಡ ವಸಡುಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅವುಗಳಿಂದ ರಕ್ತಸ್ರಾವಕ್ಕೂ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

►ವಸಡುಗಳ ನೋವಿಗೆ ಚಿಕಿತ್ಸೆ ಏನು?

ಫ್ಲೋರೈಡ್ ಒಳಗೊಂಡಿರುವ ಟೂಥ್‌ಪೇಸ್ಟ್‌ನಿಂದ ಹಲ್ಲುಜ್ಜುವಿಕೆ, ಹಲ್ಲುಗಳ ಫ್ಲಾಸಿಂಗ್ ನೋವನ್ನು ಶಮನಿಸುತ್ತವೆ. ಹಲ್ಲುಗಳ ಸೋಂಕು ಅಥವಾ ಜಿಂಜಿವೈಟಿಸ್‌ನಿಂದ ಪೀಡಿತರು ಸೋಂಕುಗಳ ಮರುಕಳಿಕೆಯನ್ನು ತಡೆಯಲು ಆ್ಯಂಟಿಸೆಪ್ಟಿಕ್ ಮೌಥ್ ರಿನ್ಸ್ ಅಥವಾ ಬಾಯಿ ಮುಕ್ಕಳಿಸುವ ದ್ರಾವಣವನ್ನು ಬಳಸಬೇಕು. ತಂಬಾಕು ಸೇವನೆಯನ್ನು ವರ್ಜಿಸುವ ಮೂಲಕ ದಂತಪಾಚಿ ಕಟ್ಟಿಕೊಳ್ಳುವುದನ್ನುಮತ್ತು ಬಾಯಿ ಸೋಂಕುಗಳನ್ನು ತಡೆಗಟ್ಟಬಹುದು. ಸಕ್ಕರೆಯುಳ್ಳ ಆಹಾರ ಮತ್ತು ಪಾನೀಯಗಳ ಸೇವನೆ ಬೇಡ. ಸೋಂಕುಗಳು ಮತ್ತು ಇತರ ರೋಗಗಳಿಗಾಗಿ ನಿಯಮಿತವಾಗಿ ದಂತವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News