ಗದ್ದಲದ ಮಧ್ಯೆ ಚರ್ಚೆ ಇಲ್ಲದೆ ಎಂಟು ಮಹತ್ವದ ವಿಧೇಯಕಗಳ ಅಂಗೀಕಾರ

Update: 2019-02-13 15:28 GMT

ಬೆಂಗಳೂರು, ಫೆ. 13: ಬಿಜೆಪಿ ಸದಸ್ಯರ ಧರಣಿ-ಗದ್ಧಲದ ಮಧ್ಯೆ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು(ತಿದ್ದುಪಡಿ) ವಿಧೇಯಕ ಸೇರಿದಂತೆ ಎಂಟು ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.

ಬುಧವಾರ ವಿಧಾನಸಭೆಯಲ್ಲಿ ಆಡಿಯೋ ಪ್ರಕರಣದ ಬಗ್ಗೆ ಸಿಟ್ ತನಿಖೆ ವಿರೋಧಿಸಿ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಯಲ್ಲಿದ್ದ ವೇಳೆ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದ ಸ್ಪೀಕರ್, ಧ್ವನಿಮತದ ಮೂಲಕ 8 ವಿಧೇಯಕಗಳಿಗೂ ಅಂಗೀಕಾರ ದೊರಕಿಸಿಕೊಟ್ಟರು.

ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ‘ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು(ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ-2018, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಧೇಯಕ, ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕ, ಕರ್ನಾಟಕ ಋಣ ಪರಿಹಾರ ವಿಧೇಯಕ, ಆರ್.ವಿ.ವಿಶ್ವವಿದ್ಯಾಲಯ ವಿಧೇಯಕ, ಆದಿಚುಂಚನ ಗಿರಿ ವಿಶ್ವವಿದ್ಯಾಲಯ ವಿಧೇಯಕ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಹಿಂದುಳಿದ ವರ್ಗಗಳ(ನೇಮಕಾತಿ ಮುಂತಾದವುಗಳ ಮೀಸಲಾತಿ) ವಿಧೇಯಕ ಸೇರಿ 8 ವಿಧೇಯಕಗಳಿಗೆ ಧ್ವನಿಮತದ ಅಂಗೀಕಾರ ನೀಡಲಾಯಿತು.

ಆ ಬಳಿಕ ಸ್ಪೀಕರ್ ರಮೇಶ್ ಕುಮಾರ್, ರಾಜಕಾರಣಕ್ಕಾಗಿ ಸದನದಲ್ಲಿ ಗದ್ದಲ ನಡೆಯುತ್ತಿದೆ. ನಾನು ಅನಿರ್ವಾಯವಾಗಿ ಮಸೂದೆಗಳ ಮಂಡನೆಗೆ ಅವಕಾಶ ನೀಡಬೇಕಾಯಿತು. ಬಜೆಟ್‌ನ ಹಣಕಾಸು ಮಸೂದೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಹೊರತುಪಡಿಸಿ ಉಳಿದ ಎಲ್ಲ ಮಸೂದೆಗಳು ಅಂಗೀಕಾರಗೊಂಡಿವೆ ಎಂದು ಘೋಷಿಸಿ, ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News