100 ಕೋಟಿ ವಂಚನೆ ಆರೋಪ: ಮಾಜಿ ಶಾಸಕನ ಪುತ್ರ ಸೇರಿ 8 ಮಂದಿಯ ಸೆರೆ

Update: 2019-02-13 15:43 GMT

ಬೆಂಗಳೂರು, ಫೆ.13: ಗೋಡಂಬಿ ಬೆಳೆಗೆ 100 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ, ವಂಚಿಸಿರುವ ಪ್ರಕರಣ ಸಂಬಂಧ ಮಾಜಿ ಶಾಸಕನ ಪುತ್ರ ಸೇರಿದಂತೆ 8 ಜನರನ್ನು ಇಲ್ಲಿನ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಗಳು ಸಾಲದ ವ್ಯವಹಾರಕ್ಕಾಗಿ ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕೊಠಡಿಯನ್ನೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

1950ರಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕರಾಗಿದ್ದ ಪಳನಿಯಪ್ಪ ಎಂಬವರ ಪುತ್ರ ಪಿ.ಕಾರ್ತಿಕೇಯನ್(60), ಮಣಿಕಂಠ ವಾಸನ್(25), ಸುಮನ್(27), ಅಭಿಲಾಷ್(27), ಕಾರ್ತಿಕ್, ಪ್ರಭು, ಜಾನ್‌ಮೂನ್, ಹಾಗೂ ಸಗವರೂಪ್ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲಾ ಮೂಲತಃ ತಮಿಳುನಾಡು ನಿವಾಸಿಗಳೆಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜು ತಿಳಿಸಿದ್ದಾರೆ.

ಏನಿದು ಪ್ರಕರಣ: ರಮೇಶ್ ಎಂಬವರು ತಮ್ಮ ಗೋಂಡಬಿ ವ್ಯಾಪಾರಕ್ಕಾಗಿ 100 ಕೋಟಿಗಳ ಸಾಲ ಕೊಡಿಸಿ ಎಂದು ಇಳಮದಿ ಎಂಬಾಕೆಯನ್ನು ಸಂಪರ್ಕಿಸಿದ್ದಾರೆ. ಬಳಿಕ ಆಕೆ, ತಮಗೆ ಪರಿಚಯವಿರುವ ಸುಂದರಂ ಸೆಲ್ವಂ, ಅಜಯ್ ಮತ್ತು ಅವರ ತಂದೆ ಕೆ.ಕೆ.ಶೆಟ್ಟಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸ್ಟಾಂಪ್ ಚಾರ್ಜ್‌ಗಾಗಿ ಸಾಲದ ಮೊತ್ತದ 1.12(ಶೇಕಡ)ನಷ್ಟು ಹಣವನ್ನು ನೀಡಬೇಕೆಂದು ಜ.2ರಂದು ವಿಧಾನಸೌಧದ ಒಂದನೇ ಮಹಡಿಯಲ್ಲಿ ಮಾತುಕತೆ ನಡೆಸಿ, ನಂತರ ಸಮೀಪದ ಓಬೇರಾಯ್ ಹೊಟೇಲ್‌ನಲ್ಲಿ ರಮೇಶ್‌ನಿಂದ 100 ರೂ. ಮೌಲ್ಯದ 5 ಸ್ಟಾಂಪ್ ಕಾಗದ, 20 ರೂಪಾಯಿ ಮೌಲ್ಯದ 5 ಸ್ಟಾಂಪ್ ಕಾಗದ ಪಡೆದು ಅದರ ಮೇಲೆ ಸಹಿ ಮಾಡಿಸಿದ್ದಾರೆ.

ಕೆಲ ಸಮಯದ ಬಳಿಕ, ಬ್ಯಾಂಕಿನ 5 ಚೆಕ್‌ಗಳನ್ನು 6 ಭಾವಚಿತ್ರಗಳ ಜೊತೆ 1.12 ಕೋಟಿ ರೂ. ಪಡೆದ ಆರೋಪಿಗಳು, ತಮಿಳುನಾಡಿಗೆ ಪರಾರಿಯಾಗಿದ್ದರು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ದೇವರಾಜ್ ವಿವರಿಸಿದರು.

ಈ ಸಂಬಂಧ ತನಿಖೆ ನಡೆಸಿದ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸಿ, 40 ಲಕ್ಷ ರೂ.ಗಳನ್ನು ವಾಪಸ್ಸು ಪಡೆದು, ರಮೇಶ್ ಅವರಿಗೆ ನೀಡಿದ್ದು, ಆರೋಪಿಗಳಿಂದ ಬಾಕಿ ಉಳಿದಿರುವ 72 ಲಕ್ಷ ರೂ.ಗಳನ್ನು ಜಪ್ತಿ ಮಾಡಬೇಕಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ವೈ ಕಚೇರಿ ದುರ್ಬಳಕೆ?

ಹಣದ ವ್ಯವಹಾರ ನಡೆಸಲು, ಆರೋಪಿಗಳು ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಕೊಠಡಿ ದುರ್ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವ್ಯವಹಾರದ ದಿನ ವಿಧಾನಸೌಧ ಪ್ರವೇಶಿಸಿದ ಮಾಜಿ ಶಾಸಕನ ಪುತ್ರ ಪಿ.ಕಾರ್ತಿಕೇಯನ್ ಸೇರಿ ಇತರರು, ಖಾಲಿ ಕೊಠಡಿಯೊಂದರಲ್ಲಿ ಕುಳಿತು ಸಚಿವರಂತೆ ವೇಷ ಧರಿಸಿದ್ದಾರೆ. ಅಷ್ಟೇ ಅಲ್ಲದೆ, ವಿಧಾನಸೌಧ ಸಿಬ್ಬಂದಿಯನ್ನು ಪರಿಚಯ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News