ವೈಯಕ್ತಿಕ ಕಾರಣಕ್ಕಾಗಿ ಮುಂಬೈಗೆ ತೆರಳಿದ್ದೆ: ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ್
ಬೆಂಗಳೂರು, ಫೆ.13: ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರನ್ನು ಬಿಜೆಪಿ ತೆಕ್ಕೆಗೆ ಸೆಳೆಯಲು ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ಬಿಂಬಿಸಲಾಗುತ್ತಿದ್ದ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ್ ಇಂದು ಮೊದಲ ಬಾರಿಗೆ ಬಜೆಟ್ ಅಧಿವೇಶನಕ್ಕೆ ಹಾಜರಾದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್, ನನಗೂ ಆಪರೇಷನ್ ಕಮಲಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಆಪರೇಷನ್ ಮಾಡಿಲ್ಲ. ನನ್ನ ಬಗ್ಗೆ ಬಂದಿರುವ ಸುದ್ದಿಗಳೆಲ್ಲ ಕಪೋಲಕಲ್ಪಿತ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದೆ. ಅವರಲ್ಲಿನ ನ್ಯೂನತೆಗಳನ್ನು ಮುಚ್ಚಿ ಹಾಕಲು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿನ ಗೊಂದಲಕ್ಕೆ ಹೊಸ ಆಯಾಮ ಕೊಡಲು ಈ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ವೈಯಕ್ತಿಕ ಕಾರಣಕ್ಕಾಗಿ ನಾನು ಮುಂಬೈಗೆ ಹೋಗಿದ್ದೆ. ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಹಾಗೂ ನಾನು ಇಬ್ಬರೂ ವೃತ್ತಿಯಲ್ಲಿ ವೈದ್ಯರು. ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಹೋಗಿದ್ದೆವು. ಆ ಸಂದರ್ಭದಲ್ಲಿನ ಭಾವಚಿತ್ರವನ್ನು ಈಗ ಬಳಸಿಕೊಳ್ಳುತ್ತಿರಬಹುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.