ಶಾಸಕ ಪ್ರೀತಂ ಗೌಡ ಬೆಂಬಲಿಗನ ಮೇಲೆ ಹಲ್ಲೆ ಪ್ರಕರಣ: ಬಿಜೆಪಿ ಸದಸ್ಯರಿಂದ ಸದನದ ಬಾವಿಗಿಳಿದು ಪ್ರತಿಭಟನೆ

Update: 2019-02-13 15:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.13: ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಬೆಂಬಲಿಗನ ಮೇಲೆ ಹಲ್ಲೆ ಕುರಿತು ಚರ್ಚಿಸಲು ಅವಕಾಶ ಕೊಡಬೇಕೆಂದು ಪ್ರತಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಬುಧವಾರ ಮಧ್ಯಾಹ್ನದ ಪರಿಷತ್ ಕಲಾಪದಲ್ಲಿ ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ, ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಗೆ ಆಡಳಿತ ಪಕ್ಷದ ಸದಸ್ಯರನ್ನು ಆಹ್ವಾನಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ, ಹಾಸನದಲ್ಲಿ ಶಾಸಕರೊಬ್ಬರ ಮನೆ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದೊಂದು ಗಂಭೀರವಾದ ಹಲ್ಲೆ ಪ್ರಕರಣವಾಗಿದೆ. ಈ ಕುರಿತು ಚರ್ಚಿಸಲು ಅವಕಾಶಕೊಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಉಳಿದ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

ಬಿಜೆಪಿ ಸದಸ್ಯರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ವಿಧಾನಪರಿಷತ್‌ನಲ್ಲಿ ವಿಧಾನಸಭೆಯ ಸದಸ್ಯರ ವಿಷಯದ ಕುರಿತು ಪ್ರಸ್ತಾಪ ಬೇಡ. ಸಭಾಪತಿಗಳ ಸೂಚನೆಯಂತೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಈ ನಡುವೆ ಆಡಳಿತ- ಪ್ರತಿಪಕ್ಷದ ಸದಸ್ಯರ ಮಾತಿನ ಚಕಮಕಿ ಮಧ್ಯೆ ಬಿಜೆಪಿ ಸದಸ್ಯರು ಬಾವಿಗಿಳಿದು ಬೇಕು, ಬೇಕು ನ್ಯಾಯ ಬೇಕು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರು ಗೂಂಡಾ ಸಂಸ್ಕೃತಿಯ ಬಿಜೆಪಿಗೆ ಧಿಕ್ಕಾರ ಕೂಗಿದರು. ಈ ವೇಳೆ ಸಭಾಪತಿಗಳು, ಸದನ ನಡೆಸಲು ಅವಕಾಶ ಕೊಡಬೇಕೆಂದು ಬಿಜೆಪಿ ಸದಸ್ಯರಲ್ಲಿ ಮನವಿ ಮಾಡಿದರು. ಸಭಾಪತಿಗಳ ಮಾತಿಗೆ ಕಿವಿಗೊಡದೆ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರೆಸಿದ ಪರಿಣಾಮ ಕಲಾಪವನ್ನು ಅರ್ಧಗಂಟೆ ಮುಂದೂಡಲಾಯಿತು. ನಂತರವೂ ಬಿಜೆಪಿ ಸದಸ್ಯರು ಸದನದಲ್ಲಿ ಬಾವಿಯಲ್ಲೇ ನಿಂತು ಪ್ರತಿಭಟನೆ ಮುಂದುವರೆಸಿದ್ದರಿಂದ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News