ಷರತ್ತು ಇಲ್ಲದೆ, ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರಿಂದ ವಿಧಾನಸೌಧ ಚಲೋ

Update: 2019-02-13 16:28 GMT

ಬೆಂಗಳೂರು, ಫೆ.13: ಯಾವುದೇ ಷರತ್ತುಗಳನ್ನು ವಿಧಿಸದೆ ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಬುಧವಾರ ವಿಧಾನಸೌಧ ಚಲೋ ಚಳುವಳಿ ನಡೆಸಿದರು.

ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 83ನೆ ಜಯಂತ್ಯುತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ, ಮಹಾದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ ಕಾರ್ಮಿಕರ ಮಹಿಳೆಯರು ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ನೇತೃತ್ವದಲ್ಲಿ ಸ್ವಾತಂತ್ರ ಉದ್ಯಾನವನವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರೈತರ ಸಾಲಮನ್ನಾ ಯೋಜನೆಯಲ್ಲಿ ನ್ಯೂನತೆ ಸರಿಪಡಿಸಬೇಕು. ಇಲ್ಲದೆ ಇದ್ದರೆ ಸಾಲಮನ್ನಾ ರೈತರಿಗೆ ದೊರೆಯುವುದಿಲ್ಲ. ಭೂ ಅಭಿವೃದ್ಧಿ ಬ್ಯಾಂಕ್‌ಗಳಿಂದ ಎತ್ತು, ಚಕ್ಕಡಿ, ಟ್ರ್ಯಾಕ್ಟರ್, ಹೈನುಗಾರಿಕೆ, ಕುರಿ ಸಾಗಾಣಿಕೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪಡೆದ ಸಾಲವನ್ನು ಸರಕಾರವು ಮನ್ನಾ ಮಾಡಿ, ಬೆಳೆ ವಿಮೆ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ ಕಟಾವು ಕೂಲಿ ಹೆಚ್ಚಳ, ಕಟಾವು ವಿಳಂಬ, ಇಳುವರಿಯಲ್ಲಿ ಮೋಸ ಆಗುತ್ತಿರುವ ಬಗ್ಗೆ ಗಮನ ಸೆಳೆಯುತ್ತಿದ್ದರೂ, ಸರಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುತ್ತಿಲ್ಲ. ಪ್ರಸಕ್ತ ಸಾಲಿಗೆ ಎಫ್‌ಆರ್‌ಪಿಗಿಂತ ಹೆಚ್ಚಿನ ಬೆಲೆ ನಿಗದಿ ಮಾಡಬೇಕು. ದ್ವಿಪಕ್ಷೀಯ ಪತ್ರ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಕೃಷಿ ಆಯೋಗ ರಚನೆ ಮಾಡಿ ರೈತರಿಗೆ ಮಾಸಿಕ ವೇತನ ನಿಗದಿ ಮಾಡಬೇಕು. ನದಿ ಮೂಲದಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯ ಜತೆಗೆ ಕೆರೆಗಳು ಇಲ್ಲದ ಗ್ರಾಮಗಳಲ್ಲಿ ಕೆರೆ ನಿರ್ಮಿಸಿ, ನೀರು ತುಂಬಿಸಬೇಕು ಸೇರಿದಂತೆ ಮೂವತ್ತು ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣಗೌಡ, ರೈತ ಪರವಾಗಿ ಹೋರಾಟ ಮಾಡುತ್ತಿರುವ ಕನಿಷ್ಟ ಹತ್ತು ಜನರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು. ಅಲ್ಲದೆ, ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆ ವಿಧಾನಸೌಧದ ಆವರಣದಲ್ಲಿ ನಿರ್ಮಾಣ ಮಾಡಬೇಕು ಆಗ್ರಹಿಸಿದರು.

ನಾಳೆ ವಿಧಾನಸೌಧ ಚಲೋ ಇಲ್ಲ

ಬುಧವಾರ ಪ್ರತಿಭಟನಾ ಸ್ಥಳ ಸ್ವಾತಂತ್ರ ಉದ್ಯಾನವನಕ್ಕೆ ಸಹಕಾರ ಸಚಿವ ಬಂಡಪ್ಪಕಾಶೆಂಪೂರ್ ಭೇಟಿ ನೀಡಿ, ಸರಕಾರದೊಂದಿಗೆ ಚರ್ಚಿಸಿ, ರೈತ ಮುಖಂಡರ ನೇತೃತ್ವದಲ್ಲೇ ಸಭೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆ, ರೈತರು ಗುರುವಾರ(ಫೆ.14) ಹಮ್ಮಿಕೊಂಡಿದ್ದ, ವಿಧಾನಸೌಧ ಚಲೋ ಚಳುವಳಿ ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News