ರಾಜಕಾರಣಿಗಳು ಕಾರ್ಪೋರೇಟ್ ಕಂಪೆನಿಗಳ ಏಜೆಂಟ್‌ಗಳಾಗಿದ್ದಾರೆ: ದೇವನೂರ ಮಹಾದೇವ

Update: 2019-02-13 16:45 GMT

ಬೆಂಗಳೂರು, ಫೆ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇಂದಿನ ಎಲ್ಲ ರಾಜಕಾರಣಿಗಳು ಜನಸೇವಕರಾಗಿಲ್ಲ. ಕಾರ್ಪೋರೇಟ್ ಕಂಪೆನಿಗಳ ಏಜೆಂಟ್‌ರಾಗಿದ್ದಾರೆ ಎಂದು ಹಿರಿಯ ಸಾಹಿತಿ ಹಾಗೂ ಚಿಂತಕ ದೇವನೂರ ಮಹಾದೇವ ಹೇಳಿದ್ದಾರೆ.

ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ ವೈಚಾರಿಕ ಸಮಾವೇಶ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ಹಣ ಆಳ್ವಿಕೆ ಮಾಡುತ್ತಿದ್ದು, ರೈತರ ಪರ ಇರಬೇಕಾದ ಜನನಾಯಕರು ಕಂಪೆನಿಗಳ ಪರವಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣದ ಹೆಸರಿನಲ್ಲಿ ಕಂಪೆನಿಗಳಿಗೆ ಮಾರುತ್ತಾ, ದೇಶ ಮಾರಾಟವನ್ನೇ ದೇಶ ಪ್ರೇಮ ಎಂದು ಜನತೆಯನ್ನು ನಂಬಿಸುತ್ತಿದ್ದಾರೆ ಎಂದು ಆಪಾದಿಸಿದರು.

ರೈತರ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪೆನಿಗಳಿಗೆ ಲಕ್ಷಾಂತರ ಕೋಟಿ ನೀಡಲಾಗುತ್ತಿದ್ದು, ಕಂಪೆನಿಗಳಿಗೆ ಸರಕಾರಗಳು ರೈತರಿಂದ ಪರೋಕ್ಷವಾಗಿ ತೆರಿಗೆ ಕಟ್ಟಿಸುತ್ತಿದ್ದಾರೆ. ಜಾಗತೀಕರಣವು ರೈತರ ಮೇಲೆ ಬರೆ ಹಾಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಕಿತ್ತು ತಿನ್ನುವ ಸಮಸ್ಯೆಗಳನ್ನು ರಾಜಕಾರಣಿಗಳಿಗೆ ತಿಳಿಸಬೇಕು. ಹೆಂಡ, ಹಣಕ್ಕೆ ಜನತೆ ಬಲಿಯಾಗಬಾರದು ಎಂದು ಅವರು ಸಲಹೆ ನೀಡಿದರು.

ರೈತರ ನೈಜ ಸಮಸ್ಯೆಗಳೊಂದಿಗೆ ಜಾಗತಿಕ ವಿದ್ಯಮಾನಗಳ ಸಂಬಂಧವನ್ನು ಕಾಣುವ ಕಣ್ಣೋಟವನ್ನು ನಂಜುಂಡಸ್ವಾಮಿ ಹೊಂದಿದ್ದರು. ಅಂತಹವರ ಜತೆ ಸುಂದ್ರೇಶ್, ಪುಟ್ಟಣ್ಣಯ್ಯರಂತಹ ವ್ಯಕ್ತಿತ್ವಗಳು ಒಟ್ಟುಗೂಡಿಕೊಂಡು, ವ್ಯವಸ್ಥೆಯ ವಿರುದ್ಧ ರಾಜಿಯಿಲ್ಲದ ಚಳವಳಿ ನಡೆಸಿದರು. ಆ ಮೂಲಕ ರೈತ ಸಂಘಕ್ಕೊಂದು ವರ್ಚಸ್ಸು ತಂದುಕೊಟ್ಟಿದ್ದಾರೆ ಎಂದು ನುಡಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಮಾತನಾಡಿ, ದೇಶದ ಕೃಷಿ ವಲಯ ತೀವ್ರವಾದ ಬಿಕ್ಕಟ್ಟಿನಲ್ಲಿದೆ. ಆದರೂ, ಆಹಾರದ ಉತ್ಪಾದನೆಯಲ್ಲಿ ಸಮೃದ್ಧಿಯಾಗಿದೆ. ಸರಕಾರಗಳು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ ನೀಡದೆ ವಂಚಿಸುತ್ತಿವೆ. ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಬೆಲೆ ನಿಗದಿ ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ ಕಳೆದ 10 ವರ್ಷಗಳಿಂದ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 14 ಬೆಲೆಗಳ ಬೆಂಬಲ ಬೆಲೆಯು ಉತ್ಪಾದನೆಯ ವೆಚ್ಚಕಿಂತ ಕಡಿಮೆ ಇದೆ ಎಂದ ಅವರು, ರೈತ ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕಾದರೆ ಅಗತ್ಯವಾದ ಕಾನೂನು ಸ್ವರೂಪ ಬೇಕಾಗಿದೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಂಜುಂಡಸ್ವಾಮಿ ಅವರ ಚಿಂತನೆಯನ್ನು ಯುವ ತಲೆಮಾರು ತಿಳಿಯಬೇಕಿದೆ. ಅವರು ಒಬ್ಬ ದಂತಕಥೆಯಾಗಿದ್ದು, ಅವರನ್ನು ಅನುಕರಿಸುವವರು ಇದ್ದಾರೆ. ಪ್ರಸ್ತುತ ಚಳವಳಿಗಳು ಕ್ರಿಯಾಶೀಲವಾಗಿದ್ದರೆ ಅದಕ್ಕೆ ನಂಜುಂಡಸ್ವಾಮಿ ಅವರ ಕೊಡುಗೆ ಹೆಚ್ಚಿದೆ ಎಂದು ತಿಳಿಸಿದರು.

ನಂಜುಂಡಸ್ವಾಮಿ ಪುಸ್ತಕದ ಕುರಿತು ಮಾತನಾಡಿದ ಲೇಖಕ ಕೆ.ಸಿ.ಬಸವರಾಜ್, ನಂಜುಂಡಸ್ವಾಮಿ ಅವರ ಬದುಕು ಚಳವಳಿಯಾಗಿತ್ತು. ರೈತ ಸಂಘ 80 ರ ದಶಕದಲ್ಲಿ ಆರಂಭವಾಯಿತು. 83ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ರೈತರ ಮೇಲೆ ಗೋಲಿಬಾರ್ ಮಾಡಿದ್ದರಿಂದ ಅಂದಿನ ಸರಕಾರವನ್ನು ಕೆಳಗಿಳಿಸಿ, ರಾಮಕೃಷ್ಣ ಹೆಗಡೆ ಅವರ ಸರಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಇದೇ ವೇಳೆ ಪ್ರೊ.ಬಸವರಾಜ್ ಅವರು ಬರೆದ ವಿಶ್ವ ರೈತ ಸಂತ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪುಸ್ತಕವನ್ನು ಚುಕ್ಕಿ ನಂಜುಂಡಸ್ವಾಮಿ ಲೋಕಾರ್ಪಣೆಗೊಳಿಸಿದರು. ರೈತರ ಕುರಿತ ರಣಹೇಡಿ ಸಿನಿಮಾದ ಆಡಿಯೋ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ, ರಾಜ್ಯ ರೈತ ಸಂಘದ ಸುನೀತಾ ಪುಟ್ಟಣ್ಣಯ್ಯ, ಚಾಮರಸ ಮಾಲಿಪಾಟೀಲ್, ಸ್ವರಾಜ್ಯ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇಂದಿನ ತಲೆಮಾರಿನ ಯುವ ಸಮುದಾಯ ಕೃಷಿಯ ಕಡೆಗೆ ಗಮನ ನೀಡುತ್ತಿಲ್ಲ. ಚಳವಳಿಯಲ್ಲಿಯೂ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ. ರೈತರ ಶಕ್ತಿ ಸಾಮೂಹಿಕ ನಾಯಕತ್ವದಲ್ಲಿ ಅಡಗಿದ್ದು, ಚಳವಳಿಗಳು ರಾಜ್ಯಕ್ಕೆ ಸೀಮಿತವಾಗದೇ ರಾಷ್ಟ್ರದಾದ್ಯಂತ ವಿಸ್ತಾರವಾಗಬೇಕು. ಎಲ್ಲರೂ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.

-ಚುಕ್ಕಿ ನಂಜುಂಡಸ್ವಾಮಿ, ನಂಜುಂಡಸ್ವಾಮಿ ಪುತ್ರಿ

ಸಮಾವೇಶದಲ್ಲಿ 3 ವಿಚಾರಗೋಷ್ಟಿ ಆಯೋಜಿಸಿದ್ದು, 2019ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಏನು ವಿಷಯದ ಬಗ್ಗೆ ಪ್ರೊ.ಯೋಗೇಂದ್ರ ಯಾದವ್, ದರ್ಶನ್ ಪುಟ್ಟಣ್ಣಯ್ಯ, ಕೃಷಿ ಬಿಕ್ಕಟ್ಟು -ಯುವ ಜನರ ತಲ್ಲಣಗಳು ಮತ್ತು ಪರಿಹಾರಗಳು ಕುರಿತು ಮಹೇಶ್ ದೇಶಪಾಂಡೆ, ಪ್ರತಿಸ್ಪಂದನೆ ಮತ್ತು ಗ್ರಾಮೀಣ ಉದ್ಯೋಗ ಸೃಷ್ಟಿಯ ಕುರಿತು ಡಾ.ಎಚ್.ವಿ. ವಾಸು, ಜನ ರಾಜಕಾರಣ ಮತ್ತು ರೈತ ಚಳವಳಿ ಬಗ್ಗೆ ಬಡಗಲಪುರ ನಾಗೇಂದ್ರ ವಿಷಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News