ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಸದನ ಸಮಿತಿ ರಚಿಸಿ: ಕೋಟಾ ಶ್ರೀನಿವಾಸ್ ಪೂಜಾರಿ
ಬೆಂಗಳೂರು, ಫೆ.13: ಸರಕಾರದ ಮಹತ್ವಾಕಾಂಕ್ಷಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ 1800 ಕೋಟಿ ರೂ.ಅವ್ಯವಹಾರ ನಡೆದಿದ್ದು, ಈ ಅವ್ಯವಹಾರದ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಸದನ ಪ್ರಾರಂಭವಾಗುತ್ತಿದ್ದಂತೆಯೇ ಮಾತನಾಡಲು ಎದ್ದು ನಿಂತ ಶ್ರೀನಿವಾಸ್ ಪೂಜಾರಿ ಅವರು, ಕುಡಿಯುವ ನೀರಿನ ಘಟಕಗಳ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 18400 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಘಟಕಗಳ ನಿರ್ಮಾಣದಲ್ಲಿ 1800 ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಅವ್ಯವಹಾರದ ತನಿಖೆಯನ್ನು ನಡೆಸಲು ಸದನ ಸಮಿತಿ ರಚಿಸಬೇಕೆಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿ ಮತನಾಡಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು, ಅಧಿವೇಶನ ಪ್ರಾರಂಭವಾಗಿ ನಾಲ್ಕೈದು ದಿನವಾದರೂ ಕಲಾಪ 1ಗಂಟೆಯೂ ಸರಿಯಾಗಿ ನಡೆದಿಲ್ಲ. ಹೀಗಾಗಿ, ಪೂಜಾರಿ ಅವರು ಶುದ್ಧ ಕುಡಿಯುವ ಘಟಕಗಳ ಬಗೆಗಿನ ಮಾತನ್ನು ಮುಂದುವರಿಸಬಾರದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೂಜಾರಿ ಅವರು ಈ ಸಮ್ಮಿಶ್ರ ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕಿ ಜಯಮಾಲಾ ಅವರು ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆಯ ಅವ್ಯವಹಾರದ ಬಗ್ಗೆ ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೂಜಾರಿ ಅವರು, ನಮ್ಮ ಪಕ್ಷದ ವತಿಯಿಂದಲೇ 30 ಜಿಲ್ಲೆಗಳಲ್ಲೂ ತನಿಖೆ ನಡೆಸಿ ವರದಿ ತಯಾರಿಸುತ್ತೇವೆ. ಹಾಗೆಯೇ ಈ ವರದಿಯನ್ನು ಸರಕಾರಕ್ಕೆ ನೀಡುತ್ತೇವೆ ಎಂದು ಹೇಳಿ ಧರಣಿಯನ್ನು ವಾಪಸ್ ಪಡೆದರು.