ವಿಧಾನಸಭೆ ಕಲಾಪ: ‘ಸಿಟ್’ ತನಿಖೆ ವಿರೋಧಿಸಿ ಬಿಜೆಪಿ ಧರಣಿ

Update: 2019-02-13 17:08 GMT

ಬೆಂಗಳೂರು, ಫೆ. 13: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣದ ತನಿಖೆಯನ್ನು ‘ಸಿಟ್’ಗೆ ವಹಿಸಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿ, ಮೈತ್ರಿ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬುಧವಾರ ವಿಧಾನಸಭೆ ಕಲಾಪ ಮಧ್ಯಾಹ್ನ 12:25ಕ್ಕೆ ಆರಂಭವಾಯಿತು. ಸ್ಪೀಕರ್ ಮೇಲೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಧ್ವನಿ ಸುರಳಿಯ ತನಿಖೆಗೆ ಸಂಬಂಧ ಸರಕಾರ ಹಠಮಾರಿ ಧೋರಣೆ ಸರಿಯಲ್ಲ. ಸರಕಾರ ತನ್ನ ನಿಲುವು ಬದಲಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆ ಮಹತ್ವದ ಎಂಟು ವಿಧೇಯಕಗಳ ಮಂಡನೆಗೆ ಅವಕಾಶ ಕಲ್ಪಿಸಿದ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ವಿಧೇಯಕಗಳ ಮಂಡನೆ, ಅಂಗೀಕಾರದ ಬಳಿಕ ಸದನದ ಕಾರ್ಯಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ಆರಂಭಕ್ಕೆ ಮಾತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ, ಸಿಟ್ ತನಿಖೆ ತೀರ್ಮಾನವನ್ನು ಮರುಪರಿಶೀಲಿಸಲು ತಾವು(ಸ್ಪೀಕರ್) ಸರಕಾರಕ್ಕೆ ಸಲಹೆ ನೀಡಿದ್ದೀರಿ. ಆದರೆ, ಸರಕಾರ ಹಠಮಾರಿ ಧೋರಣೆ ಅನುಸರಿಸುತ್ತಿರುವುದು ಸಲ್ಲ. ಇದನ್ನು ವಿರೋಧಿಸಿ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದ್ದು, ಬರ, ಕುಡಿಯುವ ನೀರು ಪೂರೈಕೆ ಮತ್ತು ಆಯವ್ಯಯದ ಮೇಲೆಯೂ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ, ಸರಕಾರ ಸಿಟ್ ತನಿಖೆ ಬೇಡ ಎಂಬ ನಮ್ಮ ಆಗ್ರಹಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಧರಣಿ ನಡೆಸಬೇಕಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ‘ಸದನ ಸಮಿತಿ, ಹಕ್ಕುಬಾಧ್ಯತಾ ಸಮಿತಿ, ಹಾಲಿ ನ್ಯಾಯಾಧೀಶರ ತನಿಖೆಗೆ ವಿರೋಧವಿಲ್ಲ. ಆದರೆ, ಯಾವುದೇ ಕಾರಣಕ್ಕೂ ‘ಸಿಟ್’ ತನಿಖೆಯನ್ನು ನಾವು ಒಪ್ಪುವುದಿಲ್ಲ. ಹೆದರಿಕೆಯಿಂದ ಫಲಾಯನ ಮಾಡಿದ್ದೇವೆಂದು ಯಾರೂ ಭಾವಿಸಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಾವು 104 ಸದಸ್ಯರಿದ್ದೇವೆ. ಸದನದಲ್ಲಿ ನಿಮ್ಮ ಗೌರವ ಕಾಪಾಡಬೇಕೆಂದು ನಾವು ಸಹಕರಿಸಿದೆವು. ಹೆದರಿಕೊಂಡು ಕೂತಿರಲಿಲ್ಲ. ನಾವು ಹೇಡಿಗಳಲ್ಲ. ಸರಿಯೋ-ತಪ್ಪೋ ಸದನ ನಡೆಯಬೇಕು. ಸ್ಪೀಕರ್‌ಗೆ ಅವಮಾನ ಆಗಬಾರದೆಂಬುದು ನಮ್ಮ ನಿಲುವು. ಆದರೆ, ಸರಕಾರ ಹಿಂದೆ ಸರಿಯುವುದಿಲ್ಲವೆಂದು ತನ್ನ ನಿಲುವಿಗೆ ಅಂಟಿಕೊಂಡಿದೆ. ಹೀಗಾಗಿ ನಾವೂ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದರು.

ಸರಕಾರದ ನಿಲುವಿನಲ್ಲಿ ಬದಲಿಲ್ಲ:

‘ರಾಜ್ಯದಲ್ಲಿ ಕೆಟ್ಟ ರಾಜಕಾರಣ ನಡೆಯುತ್ತಿದೆ. ಶಾಸಕರ ಕುದುರೆ ವ್ಯಾಪಾರದ ಮೂಲಕ ಸಂವಿಧಾನ ಬದ್ಧ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಸರಿಯಲ್ಲ. ಜನತೆ ಈ ಬೆಳವಣಿಗೆಗಳನ್ನು ಕೆಟ್ಟ ರೀತಿಯಲ್ಲಿ ನೋಡುವಂತಾಗಿದೆ. ನಿಮ್ಮ(ಸ್ಪೀಕರ್) ಮೇಲೆ ಅಪವಾದ ಬಂದಿದೆ. ಹೀಗಾಗಿ ‘ಸಿಟ್’ ತನಿಖೆಯೇ ಆಗಬೇಕು. ನ್ಯಾಯಾಂಗ ಮತ್ತು ಸದನ ಸಮಿತಿಯಿಂದ ಸತ್ಯ ಬೆಳಕಿಗೆ ಬರಲು ಸಾಧ್ಯವಿಲ್ಲ. ಕೆಟ್ಟ ರಾಜಕಾರಣಕ್ಕೆ ಕೊನೆ ಹಾಡಬೇಕು. ಆದುದರಿಂದ ಸಿಟ್ ತನಿಖೆ ತ್ವರಿತಗತಿಯಲ್ಲಿ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News