ರಜತ ಪರದೆಯ ಭ್ರಮೆ ಮತ್ತು ಮಂಜಿನ ಪರದೆಯ ವಾಸ್ತವ

Update: 2019-02-14 09:02 GMT

ರಜತ ಪರದೆ ಭ್ರಮೆ ಹುಟ್ಟಿಸುವಷ್ಟೇ ವಾಸ್ತವವನ್ನೂ ಬಿಂಬಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲ್ಲಿ ಬಿತ್ತರವಾಗುವ ಪಾತ್ರಗಳು, ಸನ್ನಿವೇಶಗಳು ಮತ್ತು ಕಥಾವಸ್ತು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು, ಉದ್ಭವಿಸುತ್ತಿರುವ ಗೊಂದಲಗಳನ್ನು ಮತ್ತು ಮುನ್ನೆಲೆಗೆ ಬರುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಜನಸಾಮಾನ್ಯರ ಮುಂದಿರಿಸುವ ಮೂಲಕ ಚಿಂತನ ಮಂಥನ ಪ್ರಕ್ರಿಯೆಗೆ ಪೂರಕವಾಗಿರಬೇಕು. 1960-70ರ ದಶಕದ ಚಿತ್ರಗಳು ಈ ಕಾರಣಕ್ಕಾಗಿಯೇ ಇಂದಿಗೂ ಪ್ರಸ್ತುತ ಎನಿಸುತ್ತವೆ. ಆದರೆ ಚಲನಚಿತ್ರ ರಂಗ ಬಹುದೂರ ಕ್ರಮಿಸಿದೆಯೇ ಹೊರತು ಪ್ರಬುದ್ಧವಾಗಿಲ್ಲ ಎನ್ನುವುದು ದುರಂತ.

ಗತ ಇತಿಹಾಸ, ಸಮಕಾಲೀನ ರಾಜಕಾರಣ ಮತ್ತು ಪ್ರಸ್ತುತ ಸಂದರ್ಭದ ರಾಜಕೀಯ ಬೆಳವಣಿಗೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಜನಸಾಮಾನ್ಯರ ಮುಂದಿಡುವ ಪರಂಪರೆಗೆ ದೀರ್ಘ ಇತಿಹಾಸವೇ ಇದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ವಿಮೋಚನೆಗಾಗಿ ಹೋರಾಡಿದ ಅಸಂಖ್ಯಾತ ನಾಯಕರ ಜೀವನ ಚರಿತ್ರೆಯನ್ನು ಸಾರುವ ಸಂದೇಶಾತ್ಮಕ ಚಲನ ಚಿತ್ರಗಳು ಹೊರಹೊಮ್ಮಿವೆ. ಈ ಪ್ರಯತ್ನಗಳ ಹಿಂದೆ ಈ ದೇಶದ ಯುವ ಪೀಳಿಗೆಗೆ ಇತಿಹಾಸವನ್ನು ಸರಳ ರೀತಿಯಲ್ಲಿ, ಮನಮುಟ್ಟುವಂತೆ ತಲುಪಿಸುವುದೇ ಆಗಿತ್ತು ಎನ್ನುವುದು ನಿರ್ವಿವಾದ. ದೃಶ್ಯ ಮಾಧ್ಯಮ ಇತರ ಎಲ್ಲ ವಿಧಾನಗಳಿಗಿಂತಲೂ ಹೆಚ್ಚು ಪ್ರಭಾವಶಾಲಿ ಎನ್ನುವುದೂ ಅಷ್ಟೇ ಸತ್ಯ. ಇಂತಹ ಚಲನಚಿತ್ರಗಳಲ್ಲಿನ ಅನೇಕ ಹಾಡುಗಳು ಇಂದಿಗೂ ಮೈನವಿರೇಳಿಸುವಂತಹ ಪ್ರಭಾವ ಉಳಿಸಿಕೊಂಡಿರುವುದನ್ನು ಗಮನಿಸಬಹುದು. ಈ ನಿಟ್ಟಿನಲ್ಲಿ ಹಿಂದಿ ಚಿತ್ರರಂಗದ ಪಾತ್ರ ನಿಜಕ್ಕೂ ಶ್ಲಾಘನೀಯ. ಸಂತ ಪರಂಪರೆಯಿಂದ ಹಿಡಿದು ವಸಾಹತು ಆಳ್ವಿಕೆಯವರೆಗೆ ಮತ್ತು ಭಾರತದ ವಿಮೋಚನೆಯವರೆಗೆ ಅನೇಕ ಚಿತ್ರಗಳಲ್ಲಿ ಇತಿಹಾಸವನ್ನು ಪರಿಣಾಮಕಾರಿಯಾಗಿ ಹಿಡಿದಿಡಲಾಗಿದೆ. ಅಷ್ಟೇ ಪರಿಣಾಮಕಾರಿಯಾಗಿ ಭಾರತದ ಪೌರಾಣಿಕ ಕಥನಗಳನ್ನೂ ಪರದೆಯ ಮೇಲೆ ಚಿತ್ರಿಸುವಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಿ ಮತ್ತು ಮರಾಠಿ ಚಿತ್ರರಂಗ ಯಶಸ್ವಿಯಾಗಿದೆ. 1960-70ರ ದಶಕಗಳಲ್ಲಿ ಬಹುಶಃ ಎಲ್ಲ ಭಾಷೆಗಳಲ್ಲೂ ಇಂತಹ ಸಂದೇಶಾತ್ಮಕ ಚಿತ್ರಗಳು ನಿರ್ಮಾಣವಾದವು. ಸ್ವತಂತ್ರ ಭಾರತದ ನವ ಆಡಳಿತ ವ್ಯವಸ್ಥೆಯನ್ನು ವೈಭವೀಕರಿಸುವ ಚಿತ್ರಗಳಿಂದ ಹಿಡಿದು ಪ್ರಭುತ್ವ ವಿರೋಧಿ ನೆಲೆಯ ಕ್ರಾಂತಿಕಾರಿ ಚಿತ್ರಗಳೂ ನಿರ್ಮಾಣವಾದವು. ಹಾಗೆಯೇ ಗಾಂಧೀಜಿಯ ಕನಸಿನ ಗ್ರಾಮರಾಜ್ಯ, ನೆಹರೂ ಕನಸಿನ ಔದ್ಯಮಿಕ ಭಾರತವನ್ನೂ ಅನೇಕ ಚಿತ್ರಗಳಲ್ಲಿ ವಿಭಿನ್ನ ಆಯಾಮಗಳಲ್ಲಿ ಪ್ರಸ್ತುತಪಡಿಸಲಾಗಿತ್ತು. ಮತ್ತೊಂದೆಡೆ ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ಸಂದೇಶದ ರೂಪದಲ್ಲಿ ನೀಡುವ ಅಸಂಖ್ಯಾತ ಚಿತ್ರಗಳು ನಿರ್ಮಾಣವಾದವು. ಈ ಅವಧಿಯ ಬಹುತೇಕ ಚಿತ್ರಗಳು ಸಾಕ್ಷ್ಯ ಚಿತ್ರಗಳಂತೆ ಸೂಕ್ಷ್ಮ ಸಂವೇದನೆಯನ್ನು ಹೊಂದಿರದಿದ್ದರೂ, ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದವು. ಮನೋಜ್ ಕುಮಾರ್ ಅವರ ಭಗತ್ ಸಿಂಗ್‌ನ ಕ್ರಾಂತಿಕಾರಿ ಹೋರಾಟವನ್ನು ಬಿಂಬಿಸುವ ‘ಶಹೀದ್’, ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನಾಧರಿಸಿದ ‘ಉಪಕಾರ್’, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯೊಡನೆ ತೌಲನಿಕವಾಗಿ ಅಳೆಯುವ ‘ಪೂರಬ್ ಔರ್ ಪಶ್ಚಿಮ್’, ನಿರುದ್ಯೋಗ ಮತ್ತು ಯುವ ಜನತೆಯ ಹತಾಶೆಯನ್ನು ಬಿಂಬಿಸುವ ‘ರೋಟಿ ಕಪಡಾ ಔರ್ ಮಕಾನ್’ ಇವು ಬಾಲಿವುಡ್ ಚಿತ್ರರಂಗದಲ್ಲಿ ಮೈಲಿಗಲ್ಲುಗಳನ್ನೇ ಸ್ಥಾಪಿಸಿದ್ದವು. ಈ ಚಿತ್ರಗಳಲ್ಲಿ ಹಲವು ನ್ಯೂನತೆಗಳು, ವೈಭವೀಕರಣ, ರಂಜನೀಯತೆ ಮತ್ತು ವಾಸ್ತವತೆಯಿಂದ ದೂರವಾದ ಹಲವು ಅಂಶಗಳಿದ್ದರೂ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದ್ದವು ಎನ್ನುವುದು ನಿರ್ವಿವಾದ.

ಈ ಎರಡು ದಶಕಗಳಲ್ಲಿ ಭೂ ಹೋರಾಟ ಮತ್ತು ಗ್ರಾಮೀಣಾಭಿವೃದ್ಧಿ, ಕೃಷಿಕರ ಸಮಸ್ಯೆ, ಕಾರ್ಮಿಕರ ಬವಣೆ, ನಿರುದ್ಯೋಗ ಸಮಸ್ಯೆ, ಸಂಪ್ರದಾಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಇವೇ ಮುಂತಾದ ಕಥಾವಸ್ತು ಇದ್ದ ಅನೇಕ ಚಿತ್ರಗಳು ನಿರ್ಮಾಣವಾದವು. ಮೃಣಾಲ್ ಸೇನ್, ಶ್ಯಾಂ ಬೆನಗಲ್, ಸತ್ಯಜಿತ್ ರೇ, ಗೌತಮ್ ಘೋಷ್, ಅಡೂರು ಗೋಪಾಲಕೃಷ್ಣನ್, ಗಿರೀಶ್ ಕಾಸರವಳ್ಳಿ, ಭಾರತಿರಾಜ, ಋತ್ವಿಕ ಘಟಕ್ ಇನ್ನೂ ಮುಂತಾದ ನಿರ್ದೇಶಕರು ಭಾರತೀಯ ಸಮಾಜದ ಆಂತರ್ಯದಲ್ಲಿನ ತುಮುಲಗಳನ್ನು, ದಬ್ಬಾಳಿಕೆಯನ್ನು, ಶೋಷಕ ವ್ಯವಸ್ಥೆಯನ್ನು ಮತ್ತು ಜಾತಿ ವ್ಯವಸ್ಥೆಯ ಸೂಕ್ಷ್ಮಪದರಗಳನ್ನು ಬಿಡಿ ಬಿಡಿಯಾಗಿ ಜನಸಾಮಾನ್ಯರ ಮುಂದೆ ಬಿಡಿಸಿಟ್ಟಿದ್ದರು. ಹಾಗಾಗಿಯೇ ಭಾರತೀಯ ಚಿತ್ರರಂಗದ 125 ವರ್ಷಗಳ ಇತಿಹಾಸದಲ್ಲಿ ಈ ಎರಡು ದಶಕಗಳು ಚಿರಸ್ಥಾಯಿಯಾಗಿ ಉಳಿಯುತ್ತವೆ. ಈ ಅವಧಿಯಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿದ್ದ ಪ್ರಶ್ನೆಗಳೆಂದರೆ ಬಡತನ, ನಿರುದ್ಯೋಗ, ಯುವ ಜನತೆಯ ಅನಿಶ್ಚಿತತೆ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ದೌರ್ಜನ್ಯ ಮತ್ತು ಸಂಪ್ರದಾಯದ ಆಧಿಪತ್ಯ. ಮತಾಂಧತೆ ಮತ್ತು ಕೋಮುವಾದ ಕೊಂಚ ಮಟ್ಟಿಗೆ ಇದ್ದರೂ ಅದು ಪ್ರಮುಖ ಸಮಸ್ಯೆಯಾಗಿರಲಿಲ್ಲ.

ಮನರಂಜನೆಯೇ ಪ್ರಧಾನ ವಸ್ತುವಾಗಿರುವ ಒಂದು ದೃಶ್ಯ ಮಾಧ್ಯಮ ಹೇಗೆ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು/ನಿಭಾಯಿಸಬಹುದು ಎಂದು ಈ ಅವಧಿಯ ಚಲನ ಚಿತ್ರಗಳು ಸಾದರಪಡಿಸಿದ್ದವು. ಕನ್ನಡ ಚಿತ್ರರಂಗದಲ್ಲೂ ‘ಸರ್ವಮಂಗಳ’ದಿಂದ ‘ಬಂಗಾರದ ಮನುಷ್ಯ’ ಚಿತ್ರದವರೆಗೆ ಇಂತಹ ಚಿತ್ರಗಳು ನಿರ್ಮಾಣವಾದವು. ‘ಗರಂಹವಾ’, ‘ಫಣಿಯಮ್ಮ’, ‘ಅವಸ್ಥೆ’, ‘ಉದ್ಭವ’, ‘ಕಾಡು’, ‘ಚೋಮನದುಡಿ’, ‘ಕಾಕನಕೋಟೆ’, ‘ಘಟಶ್ರಾದ್ಧ’, ‘ತಬರನ ಕಥೆ’, ‘ಸಂಸ್ಕಾರ’ ಹೀಗೆ ಅನೇಕ ಚಿತ್ರಗಳು ನಮ್ಮ ಸಮಾಜದೊಳಗಿನ ಆಂತರಿಕ ತುಮುಲಗಳನ್ನು, ನ್ಯೂನತೆಗಳನ್ನು, ದಬ್ಬಾಳಿಕೆಯ ಪದರಗಳನ್ನು ಬಿಡಿಸಿಟ್ಟಿದ್ದವು. ಸಾಹಿತ್ಯದಿಂದ ಸಮಾಜ ಬದಲಾಗುವುದಿಲ್ಲ ಎಂದು ಹೇಳುವವರು ಈ ಚಿತ್ರಗಳಿಂದ ಸಮಾಜವೇನೂ ಬದಲಾಗಲಿಲ್ಲ ಎಂದೂ ಹೇಳಬಹುದು. ಆದರೆ ಆ ಕಾಲಘಟ್ಟದಲ್ಲಿ ಜನಸಾಮಾನ್ಯರ ಮುಂದಿದ್ದ ಹಲವು ಸವಾಲುಗಳಿಗೆ ಈ ಚಿತ್ರಗಳು ಸ್ಪಂದಿಸಿದ್ದವು, ಸಾಂತ್ವನ ನೀಡಿದ್ದವು, ಭರವಸೆಯನ್ನೂ ನೀಡಿದ್ದವು. ಪರಿವರ್ತನೆಯ ಹಾದಿಯಲ್ಲಿ ಹೊಸ ಹೆಜ್ಜೆಗಳನ್ನು ಗುರುತಿಸಲು ನೆರವಾಗಿದ್ದವು. ತಮಿಳು ಚಿತ್ರರಂಗದ ಗ್ರಾಮೀಣ ಬದುಕು ಆಧರಿಸಿದ ಚಿತ್ರಗಳು, ತೆಲುಗು ಚಿತ್ರರಂಗದ ನಕ್ಸಲ್ ಚಳವಳಿಯನ್ನಾಧರಿಸಿದ ಚಿತ್ರಗಳೂ ಇಲ್ಲಿ ಉಲ್ಲೇಖನಾರ್ಹ.

 ಇಂದು ಭಾರತ ವಿಭಿನ್ನ ನೆಲೆಯಲ್ಲಿ ನಿಂತಿದೆ. ಚಲನಚಿತ್ರಗಳ ಸ್ವರೂಪ ಬದಲಾಗಿದೆ. ರಜತ ಪರದೆಯ ವ್ಯಾಪ್ತಿ ಹಿರಿದಾಗಿದೆ. ದೃಶ್ಯ ಮಾಧ್ಯಮ ಮರುಹುಟ್ಟು ಪಡೆದಿದ್ದು ತನ್ನ ಮೂಲ ಸ್ವರೂಪದಿಂದ ಬಹುದೂರ ಸಾಗಿದೆ. 1960-70ರ ದಶಕದಲ್ಲಿ ಸೃಜನಶೀಲತೆಯೇ ಮುಖ್ಯವಾಗಿತ್ತು. ಇಂದು ಬಂಡವಾಳಶೀಲತೆ ಮುಖ್ಯವಾಗಿದೆ. ಚಿತ್ರ ನಿರ್ಮಾಣಕ್ಕೆ ಹೂಡಿದ ಬಂಡವಾಳ, ವಿದೇಶಗಳಲ್ಲಿನ ಪ್ರದರ್ಶನ, ಬಿಡುಗಡೆಯಾಗುವ ಚಿತ್ರಮಂದಿರಗಳ ಸಂಖ್ಯೆ ಮತ್ತು ವೈಭವೀಕರಿಸಿದ ನಾಯಕ ನಟರ ಇಮೇಜ್ ಇವು ಇಂದಿನ ಚಿತ್ರರಂಗದ ಮುಖ್ಯ ಲಕ್ಷಣಗಳಾಗಿವೆ. ಹಾಗಾಗಿ ಸಿನೆಮಾ ರಂಗದಲ್ಲಿನ ವ್ಯಕ್ತಿ ಪೂಜೆ ಮತ್ತು ಆರಾಧನಾ ಸಂಸ್ಕೃತಿ ಪರದೆಯ ಮೇಲೆಯೂ ಸಹ ರಾರಾಜಿಸುತ್ತಿದೆ. ಚಲನಚಿತ್ರದಲ್ಲಿನ ನಾಯಕ ಕಥಾವಸ್ತುವಿನ ಪಾತ್ರಧಾರಿಯಾಗದೆ, ಪರದೆಯಾಚೆಗಿನ ಸಮಾಜದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ‘‘ಆರು ಕೋಟಿ ಕನ್ನಡಿಗರು ನನ್ನೊಂದಿಗಿದ್ದಾರೆ’’ ಎನ್ನುವ ನಾಯಕ ನಟನ ಮಾತುಗಳು ನಿದರ್ಶನವಷ್ಟೆ. (ಇದು ದಕ್ಷಿಣ ಭಾರತದ ಚಿತ್ರಗಳ ವೈಶಿಷ್ಟ್ಯ ಎನ್ನಲೂಬಹುದು). ಬಂಡವಾಳಶಾಹಿ ಅರ್ಥವ್ಯವಸ್ಥೆಗೆ ಇಂತಹ ಬೆಳವಣಿಗೆಗಳು ವರದಾನವಾಗುತ್ತವೆ. ರಜತ ಪರದೆಯ ಮೇಲಿನ ನಾಯಕ ನಟನನ್ನು ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಬಳಸಿಕೊಳ್ಳುವ ಆಳುವ ವರ್ಗಗಳ ತಂತ್ರಗಾರಿಕೆಗೆ ಚಿತ್ರರಂಗದ ಈ ಬೆಳವಣಿಗೆ ಪೂರಕವಾಗಿ ಪರಿಣಮಿಸುತ್ತದೆ. ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಸಲಾಗುತ್ತಿರುವ ಬೃಹತ್ ಬಂಡವಾಳ ಮತ್ತು ಈ ಬಂಡವಾಳವನ್ನು ಪೂರೈಸುವ ಕಾರ್ಪೊರೇಟ್ ಉದ್ಯಮಿಗಳು ರಜತ ಪರದೆಯನ್ನೂ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಕಾಣುತ್ತಿದ್ದೇವೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಅನುಪಮ್ ಖೇರ್ ನಟಿಸಿರುವ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಮತ್ತು ‘ಉರಿ - ಸರ್ಜಿಕಲ್ ಸ್ಟ್ರೈಕ್’ ಚಿತ್ರಗಳು ಗಮನ ಸೆಳೆಯುತ್ತವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನವನ್ನು ಬಿಂಬಿಸುವ ಆ್ಯಕ್ಸಿಡೆಂಟಲ್... ಚಿತ್ರದ ಶೀರ್ಷಿಕೆಯೇ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸುವಂತಿದೆ. ಭಾರತ ಅನುಸರಿಸುತ್ತಿರುವ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಪಕ್ಷ ಅಧಿಕಾರಕ್ಕೆ ಬರುತ್ತದೆಯೇ ಹೊರತು ಅತಿ ಹೆಚ್ಚು ಮತಗಳನ್ನು ಗಳಿಸುವ ಪಕ್ಷ ಅಲ್ಲ. ಮತ್ತೊಂದೆಡೆ ಅಧಿಕೃತವಾಗಿ ಪ್ರಧಾನಿ ಅಭ್ಯರ್ಥಿಯನ್ನು ಸಾರ್ವಭೌಮ ಪ್ರಜೆಗಳು ಆಯ್ಕೆ ಮಾಡುವುದಿಲ್ಲ. ಚುನಾಯಿತ ಪ್ರತಿನಿಧಿಗಳು ತಮ್ಮ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಪ್ರಧಾನಮಂತ್ರಿಯ ಆಯ್ಕೆ ಮಾಡುತ್ತಾರೆ. ಹಾಗಾಗಿ ಜನಸಾಮಾನ್ಯರ ದೃಷ್ಟಿಯಲ್ಲಿ ಪ್ರಧಾನಿ ಹುದ್ದೆ ಸದಾ ಆ್ಯಕ್ಸಿಡೆಂಟಲ್ ಆಗಿರುತ್ತದೆ. 2014ರಲ್ಲಿ ಮೋದಿಯ ಆಯ್ಕೆಯೂ ಅಷ್ಟೇ ಅಲ್ಲವೇ? ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ನರಸಿಂಹರಾವ್, ದೇವೇಗೌಡರೂ ಸಹ ಹೀಗೆಯೇ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು. ಇದು ಸಂವಿಧಾನದ ಚೌಕಟ್ಟಿನಲ್ಲೇ ಅಧಿಕೃತವಾಗಿ ನಡೆಯುವ ಪ್ರಕ್ರಿಯೆಯಾಗಿರುವುದರಿಂದ ಆಕ್ಷೇಪಾರ್ಹವೇನಲ್ಲ. ಆದರೆ ವಿಶ್ವವ್ಯಾಪಿ ಪ್ರಸಾರವಾಗುವ ಚಲನಚಿತ್ರವೊಂದಕ್ಕೆ ಈ ರೀತಿಯ ಶೀರ್ಷಿಕೆ ನೀಡುವುದು ಸ್ವೀಕೃತ ಸಾಂವಿಧಾನಿಕ ನಿಯಮಗಳ ಕ್ರೂರ ವ್ಯಂಗ್ಯ ಎನಿಸುವುದಿಲ್ಲವೇ?

  ಒಬ್ಬ ಸಾರ್ವಜನಿಕ ವ್ಯಕ್ತಿಯ ಬದುಕನ್ನೇ ಕಥಾವಸ್ತುವನ್ನಾಗಿ ಬಳಸಿಕೊಂಡು ನಿರ್ಮಿಸುವ ಚಿತ್ರಗಳು ರಜತ ಪರದೆಯನ್ನು ಸೃಜನಶೀಲತೆಯ ಪ್ರಯೋಗಾಲಯವಾಗಿ ಬಳಸಿಕೊಂಡಾಗ ಅದು ಒಂದು ಕಲಾಕೃತಿಯಾಗುತ್ತದೆ. ರಿಚರ್ಡ್ ಅಟನ್‌ಬರೋ ಅವರ ‘ಗಾಂಧಿ’ ಈ ನಿಟ್ಟಿನಲ್ಲಿ ಶ್ರೇಷ್ಠ ನಿದರ್ಶನ. ಆದರೆ ಚಿತ್ರ ನಿರ್ಮಾಪಕರು ರಾಜಕೀಯ ಚಿಂತನೆ ಮತ್ತು ಚಿಂತನಾವಾಹಿನಿಯ ಕೈಬಂಧಿಯಾದರೆ ಅದು ಒಂದು ಪ್ರಣಾಳಿಕೆಯ ರೂಪದಲ್ಲಿ, ಕರಪತ್ರದ ರೂಪದಲ್ಲಿ ಜನರ ಮುಂದಿರುತ್ತದೆ. ಮೋದಿ ಸರಕಾರ ನವ ಉದಾರವಾದಿ ಆರ್ಥಿಕತೆಯನ್ನು ಮತ್ತಷ್ಟು ಬಲಗೊಳಿಸಲು ಯತ್ನಿಸುತ್ತಿದ್ದರೆ ಈ ಅರ್ಥವ್ಯವಸ್ಥೆಗೆ ತಳಪಾಯ ಹಾಕಿದವರು ಇದೇ ಆಕ್ಸಿಡೆಂಟಲ್ ಪ್ರಧಾನಿ ಎಂಬುದನ್ನು ಇಲ್ಲಿ ಗಮನಿಸಬೇಕು. ಬಹುಶಃ ಈ ಅಂಶವನ್ನು ಚಿತ್ರದಲ್ಲಿ ಸಮರ್ಥವಾಗಿ ಬಿಂಬಿಸಿ ನವ ಉದಾರವಾದದ ದುಷ್ಟ ಆಯಾಮಗಳನ್ನು ಪರಿಚಯಿಸಿದ್ದಲ್ಲಿ ಆಳುವ ವರ್ಗಗಳಿಗೆ ಮುಖಭಂಗವಾಗುತ್ತಿತ್ತು. ಚಿತ್ರ ನಿರ್ಮಾಣ ಮತ್ತು ಅದರ ಹಿಂದಿನ ಬಂಡವಾಳದ ಪ್ರೇರಣಾ ಶಕ್ತಿ ಏನಿರಬಹುದು ಎಂದು ಗ್ರಹಿಸಲು ಇಷ್ಟು ಸಾಕ್ಷ್ಯ ಸಾಕಲ್ಲವೇ ?

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News