ಬಿಲ್ಲವ-ಮುಸ್ಲಿಮ್ ಒಗ್ಗಟ್ಟಿನಲ್ಲೇ ಗೆಲುವಿದೆ

ಬಿಲ್ಲವರು ರಾಜಕೀಯವಾಗಿ ಜಾತಿಯನ್ನು ಮೀರಿ ಧರ್ಮಕ್ಕೆ ನಿಷ್ಠರಾಗಿರಬೇಕೆಂದು ಯೋಚನೆ ಮಾಡತೊಡಗಿದ್ದು ನಿಜ. ಆದರೆ ಅವರು ಅಪ್ಪಿಕೊಂಡಿದ್ದು ಮನುಷ್ಯರೆಲ್ಲರೂ ಒಂದು ಜಾತಿ ಎನ್ನುವ ನಾರಾಯಣ ಗುರು ಚಿಂತನೆಯ ಹಿಂದೂ ಧರ್ಮವನ್ನಲ್ಲ, ಅವರು ತಮ್ಮನ್ನು ಬಲಿಪೀಠಕ್ಕೆ ಅರ್ಪಿಸಿಕೊಂಡಿದ್ದು ಅಸಮಾನತೆ, ಅಸ್ಪೃಶ್ಯತೆ, ಅವಕಾಶ ನಿರಾಕರಣೆಯ ಅನಿಷ್ಠಗಳನ್ನೊಳಗೊಂಡ ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಮನುವಾದಿ ಹಿಂದೂ ಧರ್ಮಕ್ಕೆ. ಇದರಿಂದಾಗಿಯೇ ಸಾಮಾಜಿಕ ಕ್ಷೇತ್ರದಲ್ಲಿ ಅವರ ಸ್ಥಾನಮಾನ ಬದಲಾಗಲಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕೂಡಾ ಸಿಗಲಿಲ್ಲ.

Update: 2024-04-23 05:22 GMT

‘‘ಕೋಮುವಾದ ಹೆದರುವುದು ಜಾತ್ಯತೀತತೆಗೆ ಅಲ್ಲ, ಜಾತಿವಾದಕ್ಕೆ’’ ಎನ್ನುವ ಅಭಿಪ್ರಾಯ ಸರಳ, ಉತ್ಪ್ರೇಕ್ಷಿತ ಮತ್ತು ಅಷ್ಟೇ ಅಪಾಯಕಾರಿಯಾದ ವಾದದಂತೆ ಕಂಡರೂ ಇದು ಸತ್ಯ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಬಿಜೆಪಿ ಎದುರು ಸೋಲುಗಳ ಸರಮಾಲೆಯನ್ನೇ ಅನುಭವಿಸಿದ ಕಾಂಗ್ರೆಸ್ ಪಕ್ಷ ಈ ಬಾರಿ ಚೇತರಿಸಿಕೊಳ್ಳುತ್ತಿರುವಂತೆ ಕಂಡರೆ ಅದಕ್ಕೆ ಕಾರಣ ಇದೇ ಮೊದಲಬಾರಿಗೆ ಬಿಜೆಪಿಯ ಕೋಮುವಾದಕ್ಕೆ ಎದುರಾಗಿರುವ ಬಿಲ್ಲವರ ಜಾತಿವಾದ.

ವರ್ಷಗಳ ಹಿಂದೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲಿದ್ದೇನೆ ಎಂಬ ಗಾಳಿಸುದ್ದಿ ಹರಿದಾಡುತ್ತಿದ್ದಾಗ ಭೇಟಿಯಾದ ಪ್ರಮುಖ ಬಿಜೆಪಿ ನಾಯಕರೊಬ್ಬರು ‘‘ನೀವು ದಕ್ಷಿಣಕನ್ನಡದಲ್ಲಿ ಚುನಾವಣೆಗೆ ನಿಲ್ಲುವ ದುಸ್ಸಾಹಸ ಮಾಡಬೇಡಿ. ಇಲ್ಲಿ ಧರ್ಮದ ಮೇಲೆ ಚುನಾವಣೆ ನಡೆಯುವುದು, ಜಾತಿಯ ಮೇಲೆ ಅಲ್ಲ. ನಿಮ್ಮ ಜಾತ್ಯತೀತತೆಯ ಮೇಲೆ ಖಂಡಿತ ಅಲ್ಲ’’ ಎಂದು ಪುಕ್ಕಟೆ ಸಲಹೆ ನೀಡಿದ್ದರು. ಅವರು ಹೇಳಿದ್ದು ಸುಳ್ಳೇನು ಆಗಿರಲಿಲ್ಲ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿನ ಇತ್ತೀಚಿನ ಚುನಾವಣಾ ಬೆಳವಣಿಗೆಗಳನ್ನು ನೋಡಿದರೆ ಮೂರು ದಶಕಗಳ ನಂತರ ಮೊದಲ ಬಾರಿ ಇಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ಜಾತಿ ಬಗ್ಗೆ ಚರ್ಚೆಯಾಗುತ್ತಿರುವಂತೆ ಕಾಣುತ್ತಿದೆ. ‘‘ಜಾತಿ ನೋಡದೆ ಧರ್ಮದ ಆಧಾರದಲ್ಲಿ ಮತಹಾಕಲು ಹೋಗಿ ರಾಜಕೀಯವಾಗಿ ಮೂಲೆಗುಂಪಾಗಿ ಹೋದೆವು’’ ಎಂಬ ಭಾವನೆ ಬಿಲ್ಲವ ಸಮುದಾಯದಲ್ಲಿ ಹುಟ್ಟಿಕೊಂಡಿದೆ. ಆಶ್ಚರ್ಯವೆಂದರೆ ಈ ಜಾಗೃತಿಗೆ ಚಳವಳಿ-ಹೋರಾಟ, ಸಮ್ಮೇಳನ-ಅಭಿಯಾನ ಯಾವುದೂ ಕಾರಣ ಅಲ್ಲ, ಇಂತಹದ್ದೊಂದು ಅನುಭವದ ಪಾಠದಿಂದ ಪ್ರೇರಿತರಾಗಿ ಬಿಲ್ಲವರು ಮನಸ್ಸು ಬದಲಾವಣೆಯ ನಿರ್ಧಾರ ಕೈಗೊಂಡಂತಿದೆ.

ಎಂತಹ ದುರಂತ ನೋಡಿ, ಜಾತ್ಯತೀತತೆ ಮನುಷ್ಯಪರ ವಾದುದು, ಜಾತಿವಾದ ಮನುಷ್ಯ ವಿರೋಧಿಯಾದುದು ಎಂದು ನಂಬಿರುವವರು ಕೂಡಾ ಇಂದು ಬಿಜೆಪಿಯನ್ನು ಸೋಲಿಸಲು ಬಿಲ್ಲವರು ಜಾತಿವಾದಿಗಳಾಗುವುದು ಅನಿವಾರ್ಯ ಎಂಬ ಕಾರ್ಯತಂತ್ರವನ್ನು ಒಪ್ಪಿಕೊಳ್ಳುವ ಹಾಗಾಗಿದೆ.

‘’ಬಿಲ್ಲವರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾಗ, ಅವರು ‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ನಾರಾಯಣ ಗುರುಗಳ ಚಿಂತನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾಗ ನಿಮ್ಮಂತಹ ಜಾತ್ಯತೀತರು ಯಾಕೆ ಅವರನ್ನು ಬೆಂಬಲಿಸಲಿಲ್ಲ?’’ ಎಂದು ಕೆಲವರು ನನ್ನಂತಹವರನ್ನು ಪ್ರಶ್ನಿಸಬಹುದು. ಇಂತಹವರಿಗೆ ನಾರಾಯಣ ಗುರುಗಳ ಚಿಂತನೆಯ ಬಗ್ಗೆ ಯಾಗಲಿ, ಜಾತ್ಯತೀತತೆಯ ಬಗ್ಗೆಯಾಗಲಿ ಅಜ್ಞಾನ ಇದೆ ಎಂದಷ್ಟೇ ನಾನು ಹೇಳಬಲ್ಲೆ.

ಬಿಲ್ಲವರು ರಾಜಕೀಯವಾಗಿ ಜಾತಿಯನ್ನು ಮೀರಿ ಧರ್ಮಕ್ಕೆ ನಿಷ್ಠರಾಗಿರಬೇಕೆಂದು ಯೋಚನೆ ಮಾಡತೊಡಗಿದ್ದು ನಿಜ. ಆದರೆ ಅವರು ಅಪ್ಪಿಕೊಂಡಿದ್ದು ಮನುಷ್ಯರೆಲ್ಲರೂ ಒಂದು ಜಾತಿ ಎನ್ನುವ ನಾರಾಯಣ ಗುರು ಚಿಂತನೆಯ ಹಿಂದೂ ಧರ್ಮವನ್ನಲ್ಲ, ಅವರು ತಮ್ಮನ್ನು ಬಲಿಪೀಠಕ್ಕೆ ಅರ್ಪಿಸಿಕೊಂಡಿದ್ದು ಅಸಮಾನತೆ, ಅಸ್ಪೃಶ್ಯತೆ, ಅವಕಾಶ ನಿರಾಕರಣೆಯ ಅನಿಷ್ಠಗಳನ್ನೊಳಗೊಂಡ ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಮನುವಾದಿ ಹಿಂದೂ ಧರ್ಮಕ್ಕೆ. ಇದರಿಂದಾಗಿಯೇ ಸಾಮಾಜಿಕ ಕ್ಷೇತ್ರದಲ್ಲಿ ಅವರ ಸ್ಥಾನಮಾನ ಬದಲಾಗಲಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕೂಡಾ ಸಿಗಲಿಲ್ಲ.

ಈಗಿನ ದಕ್ಷಿಣ ಕನ್ನಡ ಲೋಕಭಾ ಕ್ಷೇತ್ರ ಮಂಗಳೂರು ಲೋಕಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ ದೇವರಾಜ ಅರಸರ ಸಾಮಾಜಿಕ ನ್ಯಾಯದ ಪ್ರಯೋಗದ ಕಾರಣದಿಂದ 1977ರಲ್ಲಿ ಮೊದಲ ಬಾರಿ ಬಿ. ಜನಾರ್ದನ ಪೂಜಾರಿಯವರು ಲೋಕಸಭೆ ಪ್ರವೇಶಿಸಿದ್ದರು. ಅದರ ನಂತರ ಸತತವಾಗಿ ನಾಲ್ಕು ಬಾರಿ ಗೆದ್ದ ಪೂಜಾರಿಯವರು ಕೇಂದ್ರ ಸಚಿವರಾಗಿದ್ದು ಮಾತ್ರವಲ್ಲ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾಗಿ, ಕೇಂದ್ರದಲ್ಲಿ ಎಐಸಿಸಿಯ ಪ್ರಧಾನಕಾರ್ಯದರ್ಶಿಯಾಗಿ ಒಬ್ಬ ಪ್ರಭಾವಶಾಲಿ ರಾಜಕೀಯ ನಾಯಕರಾಗಿ ಬೆಳೆದರು. ಆದರೆ 1991ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಹಿನ್ನಡೆಗೆ ಸರಿದವರು ಮತ್ತೆ ಮುನ್ನಡೆಗೆ ಬರಲು ಆಗಲೇ ಇಲ್ಲ. ಕಾಂಗ್ರೆಸ್ ಪಕ್ಷ ಉದಾರವಾಗಿ ಐದು ಬಾರಿ ಟಿಕೆಟ್ ನೀಡಿದರೂ ಸೋಲಿನ ಸುಳಿಯಿಂದ ಬಿಡುಗಡೆ ಪಡೆಯಲು ಅವರಿಗೆ ಆಗಲಿಲ್ಲ.

ಗೌಡ ಸಮುದಾಯದ ಡಿ.ವಿ. ಸದಾನಂದ ಗೌಡ ಅವರು ಒಂದು ಬಾರಿ ಮತ್ತು ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲು ಮೂರು ಬಾರಿ ಆಯ್ಕೆಯಾಗಿದ್ದಾರೆ. ಬಿಲ್ಲವರ ಮತ ಬೆಂಬಲ ಪಡೆದ ಬಿಜೆಪಿ ಇಲ್ಲಿಯ ವರೆಗೆ ಬಿಲ್ಲವರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಟಿಕೆಟ್ ನೀಡಿಲ್ಲ. ಜನಾರ್ದನ ಪೂಜಾರಿಯವರು ಕೊನೆಯ ಬಾರಿ ಗೆದ್ದದ್ದು 1989 ಲೋಕಸಭಾ ಚುನಾವಣೆಯಲ್ಲಿ. ವಿಧಾನಸಭಾ ಚುನಾವಣೆಯಲ್ಲಿಯೂ ಬಿಲ್ಲವರು ಕೊನೆಯ ಬಾರಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆದದ್ದು ಕೂಡಾ 1989ರ ವಿಧಾನಸಭಾ ಚುನಾವಣೆಯಲ್ಲಿ. ಆ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐವರು ಬಿಲ್ಲವರು ಶಾಸಕರಾಗಿ ಆಯ್ಕೆಯಾಗಿದ್ದರು. ಪುತ್ತೂರು, ಕಾಪು, ಬ್ರಹ್ಮಾವರ ಮತ್ತು ಮೂಡುಬಿದಿರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಮತ್ತು ವಿಟ್ಲ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿಲ್ಲವರು ಆಯ್ಕೆಯಾಗಿದ್ದರು.

ಯಾವಾಗ ಬಿಲ್ಲವರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಕಡೆ ವಲಸೆ ಹೋಗಲು ಪ್ರಾರಂಭಿಸಿದರೋ ಅಲ್ಲಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಕಳೆದುಕೊಳ್ಳತೊಡಗಿತು. ಬಿಲ್ಲವರೇನೋ ಬಿಜೆಪಿಗೆ ಬಲ ತಂದುಕೊಟ್ಟರು, ಅದರಿಂದ ಅವರು ಮರಳಿ ಪಡೆದದ್ದೇನು? ಜನಾರ್ದನ ಪೂಜಾರಿಯವರ ನಂತರ ಆ ಕ್ಷೇತ್ರದಿಂದ ಯಾವ ಬಿಲ್ಲವರೂ ಆಯ್ಕೆಯಾಗಿಲ್ಲ. ಜೈನ ಸಮುದಾಯದ ವಿ.ಧನಂಜಯ ಕುಮಾರ್ ನಾಲ್ಕು ಬಾರಿ, ಗೌಡ ಸಮುದಾಯದ ಡಿ.ವಿ.ಸದಾನಂದ ಗೌಡ ಒಂದು ಬಾರಿ ಮತ್ತು ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲು ಅವರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಎಂದೂ ಲೋಕಸಭಾ ಚುನಾವಣೆಗೆ ಬಿಲ್ಲವ ಅಭ್ಯರ್ಥಿಗೆ ಟಿಕೆಟ್ ನೀಡಿಯೇ ಇಲ್ಲ.

ರಾಜಕೀಯವಾಗಿ ಬಿಲ್ಲವರಿಗೆ ಯಾಕೆ ಹಿನ್ನಡೆಯಾಗುತ್ತಿದೆ ಎಂಬ ಗೋಡೆ ಬರಹ ಸ್ಪಷ್ಟವಾಗಿ ಕಾಣುತ್ತಿದ್ದರೂ ಹಿಂದುತ್ವದ ನಶೆಯಲ್ಲಿ ಮುಳುಗಿರುವ ಬಿಲ್ಲವ ಸಮಾಜ ಮುಖ್ಯವಾಗಿ ಯುವವರ್ಗ ಆ ಕಡೆ ನೋಡುವ ಪ್ರಯತ್ನವನ್ನೇ ಮಾಡಲಿಲ್ಲ. ವಿಷಾದದ ಸಂಗತಿ ಎಂದರೆ ದಾರಿ ತಪ್ಪಿ ಸ್ವವಿನಾಶದ ದಾರಿಯಲ್ಲಿ ಸಾಗುತ್ತಿದ್ದ ಬಿಲ್ಲವರನ್ನು ಎಚ್ಚರಿಸುವ ಮತ್ತು ಅವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಶಕ್ತಿ ಮತ್ತು ಯುಕ್ತಿಯ ನಾಯಕರೂ ಅವರಿಗೆ ಸಿಗಲಿಲ್ಲ. ನಾರಾಯಣ ಗುರುಗಳ ಚಿಂತನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚುಕಡಿಮೆ ಮುನ್ನೂರರಷ್ಟಿರುವ ಗುರುಮಂದಿರಗಳಲ್ಲಿನ ಭಜನೆ-ಪೂಜೆಗಳಿಗಷ್ಟೇ ಸೀಮಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರು ಪಕ್ಕದ ಕೇರಳದತ್ತ ನೋಡಿದ್ದರೆ, ಇಲ್ಲವೇ ಸಮಾಜದ ನಾಯಕರು ಯಾರಾದರೂ ತೋರಿಸಿ ಅರ್ಥಮಾಡಿಸುವ ಪ್ರಯತ್ನವನ್ನಾದರೂ ಮಾಡಿದ್ದರೆ ಇಂದಿನ ರಾಜಕೀಯ ಅನಾಥ ಸ್ಥಿತಿ ಬಿಲ್ಲವರಿಗೆ ಖಂಡಿತ ಬರುತ್ತಿರಲಿಲ್ಲ. ಕೇರಳದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲಿಯೇ ಈಳವ-ಮುಸ್ಲಿಮ್-ಕ್ರಿಶ್ಚಿಯನ್ ಮತಗಳು ಒಟ್ಟು ಮತಗಳ ಶೇಕಡಾ 60ರಷ್ಟಿದೆ. ಈ ಬಲದಿಂದಲೇ ಮೂರು ಅವಧಿಯಲ್ಲಿ ಅಲ್ಲಿ ಈಳವ ಸಮಾಜಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿದ್ದಾರೆ. ಆ ರಾಜ್ಯದಲ್ಲಿ ನಾರಾಯಣ ಗುರುಗಳು ಅವರು ಸ್ಥಾಪಿಸಿರುವ ದೇವಸ್ಥಾನಗಳಲ್ಲಿ ಮಾತ್ರ ಇಲ್ಲ. ಗುರುಗಳ ಚಿಂತನೆ ಅಲ್ಲಿನ ರಾಜಕೀಯದ ಅಜೆಂಡಾದಲ್ಲಿಯೂ ಸೇರಿಕೊಂಡಿದೆ.

ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳ ಸಿದ್ಧಾಂತಗಳಲ್ಲಿ ಭಿನ್ನತೆ ಇದ್ದರೂ ನಾರಾಯಣ ಗುರುಗಳ ಚಿಂತನೆಯ ಬಗ್ಗೆ ಪರಸ್ಪರ ಸಹಮತ ಇದೆ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕೇರಳದಲ್ಲಿ ಭಾರತೀಯ ಜನತಾ ಪಕ್ಷ ನಾರಾಯಣ ಗುರುಗಳು ಸ್ಥಾಪಿಸಿದ್ದ ‘ನಾರಾಯಣ ಗುರು ಧರ್ಮ ಪರಿಪಾಲನಾ ಸಂಸ್ಥೆ’(ಎಸ್‌ಎನ್‌ಡಿಪಿ)ಯನ್ನೇ ಒಡೆದು ಅದರ ಅಧ್ಯಕ್ಷರಿಂದ ಪ್ರತ್ಯೇಕ ರಾಜಕೀಯ ಪಕ್ಷ ಮಾಡಿಸಿ ಚುನಾವಣೆಗೆ ಇಳಿಸಿತ್ತು. ಆದರೆ ಆ ಪಕ್ಷದ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದರು. ನಾರಾಯಣ ಗುರುಗಳ ಅನುಯಾಯಿಗಳಾದವರು ಕೋಮುವಾದಿಗಳಾಗಲು ಸಾಧ್ಯ ಇಲ್ಲ, ಕೋಮುವಾದಿಗಳಾದವರು ನಾರಾಯಣ ಗುರು ಅನುಯಾಯಿಗಳಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಪ್ರತೀ ಚುನಾವಣೆಯಲ್ಲಿಯೂ ಕೇರಳದ ಮತದಾರರು ನೀಡುತ್ತಲೇ ಬಂದಿದ್ದಾರೆ.

ದುರಂತ ಎಂದರೆ ದಕ್ಷಿಣ ಕನ್ನಡದ ಬಿಲ್ಲವರ ಮುಂದೆ ಗುರಿಯೂ ಇಲ್ಲ, ಹಿಂದೆ ಗುರುವೂ ಇಲ್ಲ. ಇದರಿಂದಾಗಿ ಯಾರೋ ರಾಜಕೀಯ ನಾಯಕರು ಮತ್ತು ಸಾಮಾಜಿಕ ಪುಡಾರಿಗಳ ಕೈಗಳಲ್ಲಿ ದಾಳಗಳಾಗಿ, ಅವರ ಗುಪ್ತ ಅಜೆಂಡಾಗಳನ್ನು ಜಾರಿಗೊಳಿಸುವ ಹೋರಾಟದ ಕಾಲಾಳುಗಳಾಗಿ ವಿನಾಶದ ಕಡೆ ಹೆಜ್ಜೆ ಹಾಕತೊಡಗಿದರು.

ಬಿಲ್ಲವರು ರಾಜಕೀಯ ಹಿನ್ನಡೆ ಅನುಭವಿಸಿದ ಈ 33 ವರ್ಷಗಳ ಅವಧಿಗೆ ದೇಶದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ವಿಶೇಷವಾದ ಮಹತ್ವ ಇದೆ. ಈ ಅವಧಿಯಲ್ಲಿಯೇ ಮುಂದೆ ಸಾಗುತ್ತಿದ್ದ ಇತಿಹಾಸದ ಚಕ್ರ ಹಿಂದೆ ಚಲಿಸ ತೊಡಗಿದ್ದು, ಜಾತ್ಯತೀತ ಭಾರತ ಕೋಮುವಾದಿ ಭಾರತ ಆಗುವ ಕಡೆ ಹೆಜ್ಜೆ ಹಾಕಲು ತೊಡಗಿದ್ದು, ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದು ಮತ್ತು ಇದೇ ಅವಧಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಲುಭಾಗದಷ್ಟು ಜನಸಂಖ್ಯೆ ಇರುವ ಬಿಲ್ಲವರು ಮೂಲೆಗುಂಪಾಗಿದ್ದು. ಇವು ಯಾವುದೂ ಕಾಕತಾಳೀಯ ಅಲ್ಲ. ಈ ಎಲ್ಲ ಬೆಳವಣಿಗೆಗಳಿಗೆ ಪರಸ್ಪರ ಸಂಬಂಧ ಇದೆ ಮತ್ತು ಇದರ ಹಿಂದೆ ಕಾಣದ ಕೈಗಳ ಆಟ ಕೂಡಾ ಇದೆ.

ಹೇಳಿ ಕೇಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅನಧಿಕೃತ ಹೆಡ್ ಕ್ವಾರ್ಟರ್. ಉಳಿದೆಲ್ಲ ಕಡೆಗಿಂತ ಮೊದಲು ಮತ್ತು ವ್ಯಾಪಕವಾಗಿ ಬೇರು ಬಿಟ್ಟ ಪ್ರದೇಶ. 60-70ನೇ ದಶಕದಿಂದಲೂ ಗೌಡ ಸಾರಸ್ವತ ಬ್ರಾಹ್ಮಣರ ಪೋಷಣೆಯಲ್ಲಿ ಆರೆಸ್ಸೆಸ್ ಶಾಖೆಗಳು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಸಂಘ ಪರಿವಾರಕ್ಕೆ ಇಂತಹದ್ದೊಂದು ನೆಲೆ ಇದ್ದ ಕಾರಣದಿಂದಲೇ 1983ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ 18 ಶಾಸಕರಲ್ಲಿ ಎಂಟು ಮಂದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದರು.

ಸಂಪನ್ಮೂಲ ಮತ್ತು ಸ್ವಯಂಸೇವಕರ ಜಾಲವನ್ನೊಳಗೊಂಡ ಸಂಘ ಪರಿವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ರಾಜಕೀಯ ನೆಲೆಯ ವಿಸ್ತರಣೆಯ ಕೆಲಸ ಪ್ರಾರಂಭಿಸಬೇಕೆಂದು ಹೊರಟಾಗ ಮೊದಲು ಕಂಡದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಬಿಲ್ಲವ-ಮುಸ್ಲಿಮ್-ಕ್ರಿಶ್ಚಿಯನ್ ಮತ ಬ್ಯಾಂಕ್. ಜಾತಿ ಗಣತಿಯ ಅಧಿಕೃತ ವರದಿ ಲಭ್ಯ ಇಲ್ಲದೆ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಬಿಲ್ಲವ- ಮುಸ್ಲಿಮ್-ಕ್ರಿಶ್ಚಿಯನ್ ಸಮುದಾಯಗಳಿರುವುದು ಸತ್ಯ. ಇದರ ಪ್ರಕಾರ ಜಿಲ್ಲೆಯ 18 ಲಕ್ಷ ಮತದಾರರಲ್ಲಿ ಕನಿಷ್ಠ 9 ಲಕ್ಷ ಮತದಾರರು ಈ ಮೂರು ಸಮುದಾಯಕ್ಕೆ ಸೇರಿದ್ದಾರೆ. ಎಂಭತ್ತರ ದಶಕದ ಕೊನೆಯವರೆಗೆ ಈ ಮೂರು ಸಮುದಾ ಯಗಳು ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಆಗಿದ್ದವು. ಇದೇ ಬಲದಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಜನಾರ್ದನ ಪೂಜಾರಿಯವರು ನಾಲ್ಕು ಬಾರಿ ಮತ್ತು ಉಡುಪಿ ಲೋಕಸಭಾ ಕ್ಷೇತ್ರದಿಂದ ಆಸ್ಕರ್ ಫೆರ್ನಾಂಡಿಸ್ ಅವರು ಐದು ಬಾರಿ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವುದು.

ಈ ಮತಬ್ಯಾಂಕನ್ನು ಒಡೆಯದೆ ಇಲ್ಲಿನ ರಾಜಕೀಯ ಕ್ಷೇತ್ರವನ್ನು ಆಕ್ರಮಿಸಿಕೊಳ್ಳುವುದು ಅಸಾಧ್ಯ ಎಂದು ತಿಳಿದ ಆರೆಸ್ಸೆಸ್ ನಾಯಕತ್ವದ ಸಂಘಪರಿವಾರದ ವಿವಿಧ ಘಟಕಗಳು ಕಾಂಗ್ರೆಸ್ ಮತ ಬ್ಯಾಂಕ್ ಒಡೆಯಲು ವ್ಯೆಹ ರಚನೆಯಲ್ಲಿ ತೊಡಗಿಸಿಕೊಂಡವು. ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮುವಾದದ ಸುಂಟರಗಾಳಿ ಈ ಕೆಲಸವನ್ನು ಅವರ ದಾರಿಯನ್ನು ಇನ್ನಷ್ಟು ಸುಲಭಮಾಡಿತು. ಈ ಯೋಜನೆಯ ಭಾಗವಾಗಿಯೇ ಮುಸ್ಲಿಮ್ ಮತ್ತು ಮೊಗವೀರರು ಮತ್ತು ಮುಸ್ಲಿಮ್ ಮತ್ತು ಬಿಲ್ಲವರ ನಡುವೆ ಮುಖ್ಯವಾಗಿ ಈ ಸಮುದಾಯಗಳ ಯುವಕರನ್ನು ಬಳಸಿಕೊಂಡು ಜಗಳ ಹಚ್ಚುವ ಕೆಲಸಗಳನ್ನು ಉಪಾಯವಾಗಿ ಅಷ್ಟೇ ಎಚ್ಚರದಿಂದ ಸಂಘ ಪರಿವಾರ ಮಾಡಿತು.

ಜಿಲ್ಲೆಯ ಸಾಮಾಜಿಕ ಇತಿಹಾಸವನ್ನು ನೋಡಿದರೆ ಬಹುತೇಕ ಗೇಣಿದಾರ ಕುಟುಂಬಗಳಿಗೆ ಸೇರಿರುವ ಬಿಲ್ಲವರು ಮತ್ತು ಭೂಮಾಲಕ ವರ್ಗಕ್ಕೆ ಸೇರಿರುವ ಬಂಟ, ಜೈನ ಮತ್ತು ಬ್ರಾಹ್ಮಣ ಸಮುದಾಯಗಳ ನಡುವಿನ ಸಂಘರ್ಷಗಳನ್ನು ಕಾಣಬಹುದು. (ಬಿಲ್ಲವರು ತಮ್ಮ ಚಾರಿತ್ರಿಕ ನಾಯಕರೆಂದು ಆರಾಧಿಸುವ ಕೋಟಿ-ಚೆನ್ನಯ ಎಂಬ ಅವಳಿ ವೀರರ ಇತಿಹಾಸ ಕೂಡಾ ಇದನ್ನೇ ಪುಷ್ಟೀಕರಿಸುತ್ತದೆ) ಭೂ ಸುಧಾರಣೆ ಕಾಯ್ದೆಯಿಂದಾಗಿ ಭೂಮಿಯನ್ನು ಕಳೆದುಕೊಂಡವರು ಬಂಟ, ಬ್ರಾಹ್ಮಣ ಮತ್ತು ಜೈನ ಸಮುದಾಯದವರು, ಭೂಮಿಯನ್ನು ಪಡೆದುಕೊಂಡ ಬಹುತೇಕ ಗೇಣಿದಾರ ಕುಟುಂಬಗಳು ಬಿಲ್ಲವ ಸಮುದಾಯಕ್ಕೆ ಸೇರಿದವರು. ಈ ಹಿನ್ನೆಲೆಯಿಂದಾಗಿ ಬಿಲ್ಲವರ ಬಗ್ಗೆ ಅವರಿಗೆ ಇಲ್ಲವೇ ಅವರ ಬಗ್ಗೆ ಬಿಲ್ಲವರಿಗೆ ಅಸಮಾಧಾನ ಇದ್ದರೆ ಅದು ಮನುಷ್ಯ ಸಹಜವಾದುದು. ಆದರೆ ಬಿಲ್ಲವರು ಮತ್ತು ಮುಸ್ಲಿಮರ ನಡುವಿನ ವೈಮನಸ್ಸಿನ ಕಾರಣಗಳು ತರ್ಕಾತೀತವಾದುದು. ಈ ಎರಡು ಸಮುದಾಯಗಳ ಸಂಘರ್ಷಕ್ಕೆ ಯಾವುದೇ ಐತಿಹಾಸಿಕ ಇಲ್ಲವೇ ಸಾಮಾಜಿಕ ಪುರಾವೆಗಳು ಇಲ್ಲ. ಹಳೆಯ ಇಲ್ಲವೇ ಇತ್ತೀಚಿನ ಇತಿಹಾಸದ ಪುಟಗಳಲ್ಲಿಯೂ ಈ ಬಗ್ಗೆ ಉಲ್ಲೇಖಗಳಿಲ್ಲ.

ಆದರೆ ಇದಕ್ಕೆ ವಿರುದ್ಧವಾಗಿ ಎರಡು ಸಮುದಾಯಗಳ ನಡುವಿನ ಸಾಮರಸ್ಯದ ನಿದರ್ಶನಗಳು ವರ್ತಮಾನದ ಬದುಕಿನಲ್ಲಿ ಮಾತ್ರವಲ್ಲ ಇತಿಹಾಸದ ಪುಟಗಳಲ್ಲಿಯೂ ಇವೆ. ಉದಾಹರಣೆಗೆ ಇಂದು ಕುದ್ರೋಳಿಯಲ್ಲಿ ತಲೆಎತ್ತಿ ನಿಂತಿರುವ ಗೋಕರ್ಣನಾಥೇಶ್ವರ ದೇವಾಲಯ ಸ್ಥಾಪನೆಯ ಹಿನ್ನೆಲೆಯಲ್ಲಿ ಕೂಡಾ ಬಿಲ್ಲವ- ಮುಸ್ಲಿಮ್ ಸೌಹಾರ್ದ ಬದುಕಿನ ಸಣ್ಣ ಕತೆ ಇದೆ. ಕೇರಳದಲ್ಲಿ ಇಲ್ಲಿನ ಬಿಲ್ಲವರಿಗಿಂತ ಹೀನಾಯ ಸ್ಥಿತಿಯಲ್ಲಿದ್ದ ಈಳವರು ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ಸಾಮಾಜಿಕ ಸುಧಾರಣೆಯ ಚಳುವಳಿಯ ಮೂಲಕ ಸಾಧಿಸಿದ ಪ್ರಗತಿ ಮಂಗಳೂರಿನ ಬಿಲ್ಲವ ನಾಯಕರ ಕಿವಿಗೆ ಬಿದ್ದಿತ್ತು. ಇವರಲ್ಲೊಬ್ಬರು ಹೊಯಿಗೆ ಬಜಾರ್ ನ ಸಾಹುಕಾರ್ ಕೊರಗಪ್ಪನವರು. ಇವರು ಇತರ ಬಿಲ್ಲವ ನಾಯಕರ ಜೊತೆಗೂಡಿ ಕೇರಳಕ್ಕೆ ಹೋಗಿ ನಾರಾಯಣ ಗುರುಗಳನ್ನು ಭೇಟಿ ಮಾಡಿ ಮಂಗಳೂರಿಗೆ ಕರೆತಂದು 1912ರಲ್ಲಿ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಾಲಯ ಸ್ಥಾಪಿಸಿದರು.

ಸಾಹುಕಾರ್ ಕೊರಗಪ್ಪನವರ ಹಿನ್ನೆಲೆ ಆ ಕಾಲದಲ್ಲಿ ಬಿಲ್ಲವರು ಮತ್ತು ಮುಸ್ಲಿಮರ ನಡುವಿನ ಸೌಹಾರ್ದ ಬದುಕಿಗೆ ಒಂದು ಉದಾಹರಣೆ. ಕೊರಗಪ್ಪನವರು ಸಿ.ಅಬ್ದುಲ್ ರಹಿಮಾನ್ ಎಂಬವರ ಜೊತೆ ಪಾಲುದಾರಿಕೆಯಲ್ಲಿ ‘‘ಅಬ್ದುಲ್ ರಹಿಮಾನ್ ಆ್ಯಂಡ್ ಕೊರಗಪ್ಪ ಕಂಪೆನಿ’ ಎಂಬ ಮೀನು ಮಾರಾಟದ ಸಂಸ್ಥೆಯನ್ನು ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ಇಂತಹದ್ದೊಂದು ವ್ಯವಹಾರಿಕ ಸಂಬಂಧ ಈ ಸಮುದಾಯಗಳ ನಡುವೆ ವರ್ತಮಾನದಲ್ಲಿಯೂ ಕಾಣಬಹುದು. ಕೃಷಿಕರಾಗಿದ್ದ ಬಿಲ್ಲವರು ಬೆಳೆಯುತ್ತಿದ್ದ ತೆಂಗಿನಕಾಯಿ, ಅಡಕೆ, ಮಾವು, ಹುಣಸೆ ಹಣ್ಣುಗಳನ್ನು ಮನೆಮನೆಗೆ ಬಂದು ಖರೀದಿಸುತ್ತಿದ್ದವರು ಮುಸ್ಲಿಮ್ ವ್ಯಾಪಾರಿಗಳು. ಈ ಸೌಹಾರ್ದ ಬದುಕಿಗೆ ಸಾಕ್ಷಿಯಾಗಿ ಮೂಲ್ಕಿಯ ಬಪ್ಪನಾಡಿನಲ್ಲಿ ಮುಸ್ಲಿಮ್ ವ್ಯಾಪಾರಿ ಬಪ್ಪಬ್ಯಾರಿ ಸ್ಥಾಪಿಸಿದ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ. ಮುಸ್ಲಿಮ್ ಮೂಲದ ಬಬ್ಬರ್ಯ ಮತ್ತು ಅಲಿ ಭೂತಗಳು ಈಗಲೂ ಎರಡೂ ಸಮುದಾಯಗಳಿಗೆ ಅಭಯ ನೀಡುತ್ತಿವೆ.

ರಾಜಕೀಯ ಕಾರಣಕ್ಕಾಗಿ ಎರಡು ಸಮುದಾಯಗಳ ಬಾಂಧವ್ಯವನ್ನು ಒಡೆದುಹಾಕುವ ಮೂಲಕ ಕಾಂಗ್ರೆಸ್ ಮತಬ್ಯಾಂಕನ್ನು ಛಿದ್ರಗೊಳಿಸುವ ಪ್ರಯತ್ನವನ್ನು ಆರೆಸ್ಸೆಸ್ ಮತ್ತು ಸಂಘ ಪರಿವಾರದ ವಿವಿಧ ಘಟಕಗಳಾದ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳ ಮೊದಲಾದ ಸಂಘಟನೆಗಳು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ. ಇದರಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ರಾಜಕೀಯವಾಗಿ ಸುಭದ್ರವಾದ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ಈ ರಾಜಕೀಯದ ಆಟದಲ್ಲಿ ಬಲಿಪಶುಗಳಾದವರು ಬಿಲ್ಲವರು.

ಕಳೆದ ಮೂರು ದಶಕಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಕೋಮುಗಲಭೆಗಳ ಅಧ್ಯಯನ ನಡೆಸಿದರೆ ಬಿಲ್ಲವ ಯುವಕರನ್ನು ಸಂಘ ಪರಿವಾರ ತಮ್ಮ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡಿರುವ ಜೀವಂತ ಉದಾಹರಣೆಗಳು ಸಾಲುಸಾಲಾಗಿ ಸಿಗುತ್ತವೆ. ಎರಡು ಜಿಲ್ಲೆಗಳಲ್ಲಿ ನಡೆದಿರುವ ಕೋಮುಗಲಭೆಗೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ಮುಕ್ಕಾಲು ಪಾಲು ಬಿಲ್ಲವ ಯುವಕರ ಹೆಸರಿದೆ. ದುರಂತ ಎಂದರೆ ಈ ರೀತಿ ಹಾದಿ ತಪ್ಪಿದ ಬಿಲ್ಲವ ಯುವಕರನ್ನು ಆ ವಿಷಚಕ್ರವ್ಯೆಹದಿಂದ ಹೊರತರುವ ಕೆಲಸವನ್ನು ಬಿಲ್ಲವ ಸಮಾಜದ ಸಾಮಾಜಿಕ ಇಲ್ಲವೇ ರಾಜಕೀಯ ನಾಯಕರು ಮಾಡಲೇ ಇಲ್ಲ. ಇದು ಅಷ್ಟೊಂದು ಸುಲಭವೂ ಅಲ್ಲ.

ಉಡುಪಿಯ ಮುಸ್ಲಿಮ್ ಒಕ್ಕೂಟ ನಾಲ್ಕು ವರ್ಷಗಳ ಹಿಂದೆ ಇಂತಹದ್ದೊಂದು ಪ್ರಯತ್ನಕ್ಕೆ ಕೈಹಾಕಿತ್ತು. ಹಿಂದೂ-ಮುಸ್ಲಿಮ್ ಸ್ನೇಹ ಸಮ್ಮೇಳನ, ಏಕತಾ ಸಮ್ಮೇಳನ ನಡೆಸುವುದರಿಂದ ಇಂದಿನ ಕೋಮುಸಂಘರ್ಷವನ್ನು ಕೊನೆಗಾಣಿಸುವುದು ಸಾಧ್ಯವಾಗದು. ಇದರ ಬದಲಾಗಿ ಪ್ರತಿಯೊಂದು ಜಾತಿಯ ಜೊತೆ ಮುಸ್ಲಿಮರ ಮುಖಾಮುಖಿ ನಡೆಸಿ ಪರಸ್ಪರರ ನಡುವಿನ ತಪ್ಪು ಅಭಿಪ್ರಾಯಗಳನ್ನು ವಿಚಾರ ವಿನಿಮಯದ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದ ಒಕ್ಕೂಟ ಮುಸ್ಲಿಮ್-ಬಿಲ್ಲವ, ಮುಸ್ಲಿಮ್-ಮೊಗವೀರ ಮತ್ತು ಮುಸ್ಲಿಮ್-ಬಂಟ ಸಮಾವೇಶಗಳನ್ನು ನಡೆಸಲು ಆಯಾ ಸಮಾಜಗಳ ನಾಯಕರ ಜೊತೆ ಸಮಾಲೋಚನೆ ಪ್ರಾರಂಭಿಸಿತ್ತು. ಯೋಜನೆಯ ಪ್ರಕಾರ ಮೊದಲು ಮುಸ್ಲಿಮ್-ಬಿಲ್ಲವ ಸಮಾವೇಶ ನಡೆಸಬೇಕಾಗಿತ್ತು. ಈಗಿನ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸೇರಿದಂತೆ ಬಿಲ್ಲವ ನಾಯಕರು ಕೂಡಾ ಒಪ್ಪಿಕೊಂಡಿದ್ದರು. ಆ ಸಮಾವೇಶದಲ್ಲಿ ನಾನು ಪ್ರಧಾನ ಭಾಷಣ ಮಾಡಬೇಕಾಗಿತ್ತು.

ಈ ಸಮಾವೇಶದ ಆಮಂತ್ರಣ ಪತ್ರಿಕೆ ನೋಡಿದ ಕೂಡಲೇ ಉರಿದೆದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ನಾಯಕರು ಆ ಕಾರ್ಯಕ್ರಮ ನಡೆಯದಂತೆ ತಡೆಯಲು ಪಣತೊಟ್ಟಿದ್ದರು. ಆ ಯೋಜನೆಯ ಭಾಗವಾಗಿಯೇ ನನಗೆ ಮತ್ತು ಸೊರಕೆಯವರಿಗೆ ಹೀನಾತಿ ಹೀನ ಭಾಷೆಗಳನ್ನು ಬಳಸಿದ ಬೈಗುಳ ಮತ್ತು ಪ್ರಾಣ ಬೆದರಿಕೆಯ ಕರೆಗಳು ಶುರುವಾದವು. ಈ ರೀತಿ ಪ್ರಾಣ ಬೆದರಿಕೆ ಒಡ್ಡಿದ್ದ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರ ಬೆಂಬಲಿಗನಾಗಿರುವ ಕಡ್ತಲ ವಿಶ್ವನಾಥ ಪೂಜಾರಿ ಎಂಬ ಪುಣೆಯ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಯ ವಿರುದ್ದ ನಾನು ಪೊಲೀಸರಿಗೆ ನೀಡಿರುವ ದೂರಿನ ವಿಚಾರಣೆ ಈಗಲೂ ನಡೆಯುತ್ತಿದೆ.

‘‘ನೀವು ಬೇಕಾಗಿದ್ದರೆ ಹಿಂದೂ-ಮುಸ್ಲಿಮ್ ಸಮ್ಮೇಳನ ನಡೆಸಿ ಮುಸ್ಲಿಮ್-ಬಿಲ್ಲವ ಸಮಾವೇಶ ಯಾಕೆ ನಡೆಸುತ್ತೀರಿ?’’ ಎನ್ನುವುದು ನನಗೆ ಬೆದರಿಕೆ ಕರೆ ಮಾಡಿರುವ ಸಂಘ ಪರಿವಾರದ ಗೂಂಡಾಗಳ ಮುಖ್ಯ ಆಕ್ಷೇಪ. ಅಂದರೆ ಬಿಲ್ಲವ ಮತ್ತು ಮುಸ್ಲಿಮರ ನಡುವೆ ತಾವು ಹುಟ್ಟುಹಾಕಿರುವ ದ್ವೇಷ ಅಳಿದುಹೋಗಿ ಒಟ್ಟಾಗಿ ಬಿಟ್ಟರೆ ಭಾರತೀಯ ಜನತಾ ಪಕ್ಷದ ಪತನ ಖಂಡಿತ ಎಂಬ ಸತ್ಯದ ಅರಿವು ಸಂಘ ಪರಿವಾರಕ್ಕೆ ಇದೆ.

ಈ ಸತ್ಯದ ಅರಿವು ನಿಧಾನವಾಗಿ ಬಿಲ್ಲವ ಸಮುದಾಯಕ್ಕೂ ಆಗುತ್ತಿದೆ. ಮುಸ್ಲಿಮರ ವಿರುದ್ಧ ತಮ್ಮ ಮಕ್ಕಳನ್ನು ಎತ್ತಿಕಟ್ಟುತ್ತಿರುವ ಸಂಘ ಪರಿವಾರದ ನಾಯಕರು ತಮ್ಮ ಮಕ್ಕಳನ್ನು ಹಿಂದೂ ಧರ್ಮ ಉಳಿಸುವ ಹೋರಾಟ-ಹಾರಾಟದಿಂದ ದೂರ ಇಟ್ಟು ಅವರನ್ನು ಮೆಡಿಕಲ್, ಇಂಜಿನಿಯರಿಂಗ್ ಓದಿಸಿ ವಿದ್ಯಾವಂತ ಸತ್ಪ್ರಜೆಗಳನ್ನಾಗಿ ಮಾಡುತ್ತಿದ್ದಾರೆ. ಈ ನಾಯಕರ ಮೈನವಿರೇಳಿಸುವ, ರಕ್ತ ಕುದಿಸುವ ಭಾಷಣಗಳನ್ನು ಕೇಳಿ ಮುಸ್ಲಿಮರ ಜೊತೆ ಹೊಡೆದಾಡಿ, ಬಡಿದಾಡಿ ಪ್ರಾಣ ಕಳೆದುಕೊಂಡವರು, ಜೈಲು ಸೇರಿದವರು ಮತ್ತು ಕೇಸ್ ಹಾಕಿಸಿಕೊಂಡು ಕೋರ್ಟ್ ಅಲೆದಾಡುವವರು ನಮ್ಮ ಮಕ್ಕಳು. ‘‘ರಾಜಕೀಯವಾಗಿ ನಮ್ಮನ್ನು ಬಳಸಿಕೊಂಡ ಸಂಘ ಪರಿವಾರ ನಮ್ಮ ಕೈಗೆ ಕೊಟ್ಟಿರುವುದು ಖಾಲಿ ಚೊಂಬು ಮಾತ್ರ’’ ಎನ್ನುವ ಬೆತ್ತಲೆ ಸತ್ಯ ಬಹುತೇಕ ಬಿಲ್ಲವ ತಂದೆತಾಯಿಗಳಿಗೆ ಅರಿವಾಗಿದೆ. ಬಿಲ್ಲವ ಯುವಕರಿಗೂ ಸ್ವಲ್ಪ ಜ್ಞಾನೋದಯವಾಗಿದೆ. ಈ ಜ್ಞಾನೋದಯ ಎಷ್ಟು ಮತಗಳಾಗಿ ಪರಿವರ್ತನೆಯಾಗಲಿದೆ ಎನ್ನುವುದನ್ನು ಚುನಾವಣಾ ಫಲಿತಾಂಶ ಹೇಳಲಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ದಿನೇಶ್ ಅಮಿನ್ ಮಟ್ಟು

contributor

Similar News