ಬಿಜೆಪಿ ಗದ್ದಲದ ನಡುವೆ ಲೇಖಾನುದಾನಕ್ಕೆ ಒಪ್ಪಿಗೆ

Update: 2019-02-14 13:02 GMT

ಬೆಂಗಳೂರು, ಫೆ. 14: ಬಿಜೆಪಿ ಸದಸ್ಯರ ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ಕರ್ನಾಟಕ ಧನವಿನಿಯೋಗ(ಲೇಖಾನುದಾನ) ವಿಧೇಯಕ, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮೂಲಕ ಅನುಮೋದನೆ ನೀಡಲಾಯಿತು.

ಗುರುವಾರ ವಿಧಾನಸಭೆ 11:45ರ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರಿಸಿ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರ ನಿವಾಸದ ಮೇಲಿನ ದಾಳಿಯನ್ನು ಖಂಡಿಸಿದರು.

ಇದರ ನಡುವೆಯೇ ಸ್ಪೀಕರ್ ರಮೇಶ್‌ಕುಮಾರ್, ವರದಿಗಳನ್ನೊಪ್ಪಿಸುವುದು, ಅರ್ಜಿಗಳನ್ನೊಪ್ಪಿಸುವ ಕಲಾಪದ ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವಕ್ಕೆ ಅವಕಾಶ ನೀಡಿದರು. ಸಿಎಂ ಕುಮಾರಸ್ವಾಮಿ ಫೆ.6ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾರ್ಪಣಾ ಪ್ರಸ್ತಾವವನ್ನು ಮಂಡಿಸಿದರು.

ಆಡಳಿತ ಪಕ್ಷದ ಎಲ್ಲ ಸದಸ್ಯರು ಪ್ರಸ್ತಾವದ ಪರವಾಗಿ ಹೌದು ಎಂದು ಬೆಂಬಲಿಸಿದರೆ, ವಿಪಕ್ಷ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದ ಸ್ಥಳದಿಂದಲೇ ಇಲ್ಲ ಎಂದು ಪ್ರತಿಕ್ರಿಯಿಸಿದರು. ಅನಂತರ ಮುಖ್ಯಮಂತ್ರಿ ಕುಮಾರಸ್ವಾಮಿ 2018-19ನೆ ಸಾಲಿನ 14,581.43ಕೋಟಿ ರೂ.ಪೂರಕ ಅಂದಾಜನ್ನು ಮಂಡಿಸಿದರು.

ಅನಂತರ 2019-20ನೆ ಸಾಲಿನ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಜೂನ್ ವರೆಗೆ ಲೇಖಾನುದಾನಕ್ಕೆ ಅಂಗೀಕಾರ ಕೋರಿದರು. ಜುಲೈ ಅಂತ್ಯದ ತಿಂಗಳೊಳಗೆ ರಾಜ್ಯ ಬೊಕ್ಕಸದಿಂದ 80,16,83.60ಲಕ್ಷ ರೂ.ಗಳ ವೆಚ್ಚಕ್ಕೆ ಲೇಖಾನುದಾನ ಕೋರಿದಾಗ ವಿಧಾನಸಭೆ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News