ಪ್ರೀತಂ ಗೌಡ ಮನೆ ಮೇಲೆ ದಾಳಿ ಪ್ರಕರಣ: ‘ಹೆಲ್ಮೆಟ್’ ಧರಿಸಿ ಬಿಜೆಪಿ ಪ್ರತಿಭಟನೆ

Update: 2019-02-14 13:44 GMT

 ಬೆಂಗಳೂರು, ಫೆ.14: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ತಲೆಗೆ ‘ಹೆಲ್ಮೆಟ್ ಧರಿಸಿ’ ಪ್ರತಿಭಟನೆ ನಡೆಸಿದರು.

 ಗುರುವಾರ ನಗರದ ಮೈಸೂರು ಬ್ಯಾಂಕ್ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ನ ಗೂಂಡಾ ಕಾರ್ಯಕರ್ತರನ್ನು ಕಲ್ಲು ತೂರಾಟ ನಡೆಸಿ, ಗಲಾಟೆ ಮಾಡುವಂತೆ ಸಿಎಂ ಕುಮಾರಸ್ವಾಮಿಯವರೇ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೆ, ನೀವು ಪ್ರೀತಂ ಗೌಡನಿಗೆ ಏನಾದರೂ ಮಾಡಿ ನಾವು ನಿಮ್ಮಾಂದಿಗೆ ಇದ್ದೇವೆ ಎಂದು ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಆಜ್ಞೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹಾಸನದಲ್ಲಿ ಪ್ರೀತಂಗೌಡ ಜಯಗಳಿಸಿರುವುದನ್ನು ಜೆಡಿಎಸ್ ಸಹಿಸುವುದಿಲ್ಲ. ಹೀಗಾಗಿಯೇ, ಉದ್ದೇಶಪೂರ್ವಕವಾಗಿಯೇ ಹತ್ಯೆ ದಾಳಿ ನಡೆಸಲಾಗಿದೆ. ಇದರಲ್ಲಿ ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣನ ಕೈವಾಡ ಇದ್ದು, ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು.

 ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸದಾಶಿವ, ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ದೀಪು, ಕಿರಣ್, ಭರತ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News