ಬಿಜೆಪಿಯವರ ಮುಖ ಇಂಗು ತಿಂದ ಮಂಗನಂತಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಫೆ. 14: ‘ವಿಪಕ್ಷ ಬಿಜೆಪಿಗೆ ಜನ ಹಿತಕ್ಕಿಂತ ಸ್ವಹಿತವೇ ಮುಖ್ಯ. ಹೀಗಾಗಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡುವುದು ಬಿಟ್ಟು ರಾಜಕೀಯ ಮಾಡುತ್ತಿದ್ದು, ಇವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಅಧಿವೇಶನದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯವರ ಮುಖ ಇಂಗು ತಿಂದ ಮಂಗನಂತಾಗಿದೆ. ರಾಜ್ಯಪಾಲರ ಭೇಟಿಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟದ ದೂರು ನೀಡಲು ಹೋಗಿದ್ದು ಸಲ್ಲ.
ರಾಜ್ಯದ ಕಾನೂನು, ಸುವ್ಯವಸ್ಥೆ ವಿಚಾರ ಸದನದಲ್ಲಿ ಚರ್ಚೆ ಮಾಡಬೇಕು. ಅದು ಬಿಟ್ಟು ರಾಜಭವನಕ್ಕೆ ಹೋದ ಬಿಜೆಪಿ ತನ್ನ ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು, ವಿಪಕ್ಷದವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿಯಿಲ್ಲ. ಹೀಗಾಗಿ ಸದನಕ್ಕೆ ಅಡ್ಡಿಪಡಿಸಿದ್ದಾರೆಂದು ದೂರಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಾದರೆ ಸದನದಲ್ಲಿ ಕೇಳಬೇಕಿತ್ತು. ಸದನ ಹೇಗೆ ನಡೆಯಬೇಕಿತ್ತು ಎಂಬ ಬಗ್ಗೆ ಸದನ ಸಮಿತಿ ಸಭೆ ಕರೆದರೂ ಅಲ್ಲಿಗೂ ಹೋಗಲಿಲ್ಲ, ಅದನ್ನು ಬಿಟ್ಟು ಗದ್ದಲ ಮಾಡಿದರು. ರಾಜ್ಯಪಾಲರ ಭಾಷಣಕ್ಕೂ ಅಡ್ಡಿ ಉಂಟು ಮಾಡಿದರು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ದೂರು ನೀಡಿದ್ದೇವೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕರಿಗೆ ವಿಪ್ ಹಾಗೂ ನೋಟಿಸ್ ನೀಡಿದ್ದೇವೆ. ಅನಂತರ ಸ್ಪೀಕರ್‌ಗೆ ದೂರು ನೀಡಿದ್ದೇವೆ ಅಷ್ಟೇ ಎಂದು ಅತೃಪ್ತ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.
‘ಆಡಿಯೋ ಪ್ರಕರಣ ಸಂಬಂಧ ಸಿಟ್ ತನಿಖೆಗೆ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ನಾನೇನು ಹೇಳಿಲ್ಲ. ಇಂತಹ ವಿಚಾರಗಳನ್ನು ನಾನು ಘೋಷಣೆ ಮಾಡುವುದಕ್ಕೆ ಆಗುವುದಿಲ್ಲ. ನಾನೊಬ್ಬ ಸದಸ್ಯನಾಗಿ ಸಲಹೆ ನೀಡಿದ್ದೇನೆ ಅಷ್ಟೇ. ಸಿಟ್ ತನಿಖೆಗೆ ಆದೇಶವಾಗಿದ್ದು, ತನಿಖಾ ತಂಡವನ್ನು ಸಿಎಂ ಶೀಘ್ರವೇ ರಚನೆ ಮಾಡಲಿದ್ದಾರೆ’
-ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿ