ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ: ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಫೆ.14: ಕರ್ನಾಟಕ ಪೊಲೀಸ್ ಮಹಾಸಭಾದ ಅಧ್ಯಕ್ಷ ವಿ.ಶಶಿಧರ್ ಬಂಧನಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿಲ್ಲವೇ, ಸಿಎಂ ಬಜೆಟ್ ಟೀಕಿಸಿದ್ದಕ್ಕೇ ಬಂಧಿಸಬಹುದೇ ಎಂದು ಪ್ರಶ್ನಿಸಿದೆ. ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ವಿ.ಶಶಿಧರ್ ವಿರುದ್ಧ ಹೂಡಲಾಗಿರುವ ರಾಜದ್ರೋಹ ಪ್ರಕರಣ ಕುರಿತು ನಗರದ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಾಂತರ ತಡೆ ನೀಡಿದೆ.
ಸಿಸಿಬಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ವಿ.ಶಶಿಧರ್ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾ.ಅರವಿಂದಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿ ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, 2016ರಲ್ಲಿ ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ್ದಕ್ಕೆ ಅರ್ಜಿದಾರರನ್ನು ಬಂಧಿಸಿ ರಾಜದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಸಿಸಿಬಿ ಪೊಲೀಸರು ಕಳೆದ ವರ್ಷ ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಬಜೆಟ್ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಪೋಸ್ಟ್ ಮಾಡಿದ್ದಕ್ಕೆ ರಾಜದ್ರೋಹ ಆರೋಪದಡಿಯೇ ಪೊಲೀಸರು ಮತ್ತೆ ಶಶಿಧರ್‌ನನ್ನು ಬಂಧಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆಗ ನ್ಯಾಯಮೂರ್ತಿಗಳು, ಪೊಲೀಸರೇಕೆ ಅರ್ಜಿದಾರರ ಬೆನ್ನತ್ತಿದ್ದಾರೆ, ಪೊಲೀಸರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರೆ ತಪ್ಪೆ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಬಾರದೇ? ಅರ್ಜಿದಾರರಿಗೆ ಅಭಿವ್ಯಕ್ತಿ ಸ್ವಾತಂತ್ರವಿಲ್ಲವೇ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಪೊಲೀಸರ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಿಂದ ಹೊರಗುಳಿದು 2016ರ ಜು.4ರಂದು ಪ್ರತಿಭಟನೆ ನಡೆಸಬೇಕು ಎಂದು ಶಶಿಧರ್ ಕರೆ ನೀಡಿದ್ದರು. ಯಲಹಂಕ ನ್ಯೂ ಟೌನ್ ಠಾಣಾ ಪೊಲೀಸರು ಶಶಿಧರ್ ಬಂಧಿಸಿ, ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.