ಮಹಿಳೆಯರಿಗಾಗಿ ಆರಕ್ಷಕ ಹುದ್ದೆಗಳಲ್ಲಿ ಶೇ. 25ರಷ್ಟು ಮೀಸಲಾತಿ- ಸಚಿವ ಕೃಷ್ಣ ಭೈರೇಗೌಡ

Update: 2019-02-14 16:40 GMT

ಬೆಂಗಳೂರು, ಫೆ.14: ಗೃಹ ಇಲಾಖೆಯ ಪೊಲೀಸ್ ಹುದ್ದೆಗಳ ನೇಮಕಾತಿಯಲ್ಲಿ ಶೇ ಇಪ್ಪತ್ತೈದರಷ್ಟು ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲು  ಇಂದಿನ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ .

ಅವರು ಇ೦ದು ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು .

 ಬ್ರಾಹ್ಮಣರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ರಚನೆ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು .ಇದಕ್ಕಾಗಿ 25 ಕೋಟಿ ರೂಪಾಯಿಗಳ ನಿಧಿಯನ್ನು ಇಡಲು ಸಹ ಒಪ್ಪಿಗೆ ನೀಡಲಾಯಿತು .

ಕಾರಟಗಿ, ರಾಣೆಬೆನ್ನೂರು ,ಹುಬ್ಬಳ್ಳಿ ,ಬೆಳಗಾವಿ ಹಾಗೂ ಯಶವಂತಪುರ ಗಳಲ್ಲಿ ಕೃಷಿ ಮಾರುಕಟ್ಟೆ ಅಭಿವೃದ್ಧಿಪಡಿಸಲು  ಮುನ್ನೂರು ಕೋಟಿ ರೂಪಾಯಿಗಳನ್ನು ನಬಾರ್ಡ್ ಸಹಾಯದಿಂದ ಒದಗಿಸಲು ಇಂದಿನ ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು .

2019- 20ನೇ ಸಾಲಿನಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಬೈಸಿಕಲ್ ವಿತರಿಸಲು 189 ಕೋಟಿ ರೂಪಾಯಿಗಳನ್ನು ನೀಡಲೂ ಸಹ ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು .

ಇದುವರೆಗೂ ವಿಶೇಷ ಚೇತನರ ಸೌಲಭ್ಯಗಳನ್ನು ಪಡೆಯಲು ಕೇವಲ ಏಳು ದೈಹಿಕ ನ್ಯೂನತೆಗಳನ್ನು ಗುರುತಿಸಲಾಗಿತ್ತು ಇದನ್ನು ಈಗ 21 ದೈಹಿಕ ನ್ಯೂನ್ಯತೆಗಳಿಗೆ ವಿಸ್ತರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು .

ಸರೋಜಿನಿ ಮಹಿಷಿ ವರದಿಯಲ್ಲಿ ಉಲ್ಲೇಖಿಸಿರುವಂತೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಕಾನೂನಿನ ಬಲ ತುಂಬುವ ಪ್ರಯತ್ನ ಮಾಡಲಾಗಿದೆ. ಇದರ ಪ್ರಕಾರ ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಗ್ರೂಪ್ ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಲು ಇಂದಿನ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News