ಭಾರತಿ ಶೆಟ್ಟಿ ರಾಜೀನಾಮೆ ನೀಡಲಿ: ಡಾ.ಪುಷ್ಪಾ ಅಮರನಾಥ್

Update: 2019-02-14 16:56 GMT

ಬೆಂಗಳೂರು, ಫೆ.13: ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನಳಲ್ಲ. ಮಹಿಳೆಗೆ ಸಮಾನತೆ ಬೇಡ ಎನ್ನುವ ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಗೊಡ್ಡು ಸಂಪ್ರದಾಯದಂತೆ ಮನೆಯಲ್ಲಿ ಮುಸರೆ ತಿಕ್ಕಲಿ ಹಾಗೂ ಬಿಜೆಪಿಯವರು ಮಹಿಳಾ ಮೋರ್ಚಾ ವಿರ್ಸಜಿಸಲಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಆಗ್ರಹಿಸಿದ್ದಾರೆ.

ಸಮಾನತೆ ಇಲ್ಲದ ಕಾಲದಲ್ಲಿ ಮಹಿಳೆಯ ಸ್ಥಿತಿ ಹೇಗಿತ್ತು ಎನ್ನುವುದನ್ನು ಅವರ ತಾಯಿ, ಅಜ್ಜಿ, ಮುತ್ತಜ್ಜಿಯಿಂದ ಕೇಳಿ ತಿಳಿಯಲಿ. ‘ದಯೆ ಇಲ್ಲದ ಧರ್ಮ ಯಾವುದಯ್ಯ’ ಎಂದು ಬಸವಣ್ಣ ಹೇಳಿದ್ದಾರೆ. ನಿಮ್ಮ ಧಾರ್ಮಿಕತೆಯಲ್ಲಿ ಮಹಿಳೆಗೆ ದಯೆ ಇಲ್ಲವೇ, ಮಹಿಳೆಗೆ ರಾಜಕೀಯ ಸಮಾನತೆ ಬೇಕು ಎಂದಾದರೆ ಧಾರ್ಮಿಕ ಸಮಾನತೆಯೂ ಇರಬಾರದೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೆ, ಅಲ್ಲಿ ದೇವತೆಗಳು ವಾಸಿಸುತ್ತಾರೆ’ ಎಂದು ನಿಮ್ಮ ಸಂಪ್ರದಾಯವಾದಿಗಳು ಹೇಳಿದ್ದಾರೆ. ಈಗ ಅಯ್ಯಪ್ಪನ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನು ಅಗೌರವದಿಂದ ಕಾಣಲಾಗುತ್ತಿದೆ. ಈಗ ಅಲ್ಲಿ ದೇವರು ಇದ್ದಾರೆಯೇ? ಎನ್ನುವುದನ್ನು ಭಾರತಿ ಶೆಟ್ಟಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

 ಓರ್ವ ಮಹಿಳೆಯಾಗಿ ಮಹಿಳೆಗೆ ಸಮಾನತೆ ಬೇಡ ಎನ್ನುವ ಸಹೋದರಿ ಭಾರತಿ ಶೆಟ್ಟಿ ಬಗ್ಗೆ ಮರುಕಪಡದೆ ಬೇರೇನೂ ಹೇಳಲಾರೆ, ಅವರನ್ನು ಟೀಕಿಸಲಾರೆ. ಈ ಹೇಳಿಕೆ ಬಿಜೆಪಿಯವರ ಮುಖವಾಡವನ್ನು ಬಯಲು ಮಾಡಿ ಮನು ಧರ್ಮ ಶಾಸ್ತ್ರದ ಮನಸ್ಥಿತಿಯಿಂದ ಹೊರಬಂದು ಸ್ವತಂತ್ರವಾಗಿ ಯೋಚಿಸಲಿ ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದು ಪುಷ್ಪಾ ಅಮರನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News