ಬಿಹಾರದಲ್ಲಿ ನಾಳೆಯಿಂದ ಓಬಿಸಿ ರಾಷ್ಟ್ರೀಯ ಅಧಿವೇಶನ: ಈಶ್ವರಪ್ಪ

Update: 2019-02-14 17:33 GMT

ಬೆಂಗಳೂರು, ಫೆ. 14: ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ರಾಷ್ಟ್ರೀಯ ಅಧಿವೇಶನ ನಾಳೆ(ಫೆ.15)ಯಿಂದ ಬಿಹಾರದ ಪಾಟ್ನಾದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಉಸ್ತುವಾರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಹಿಂದಿನ ಸರಕಾರಗಳು ಯಾವುದೇ ಸಂವಿಧಾನಬದ್ಧ ಹಕ್ಕುಗಳನ್ನು ನೀಡಿರಲಿಲ್ಲ. ಈಗಿನ ಬಿಜೆಪಿ ಸರಕಾರ ಹಿಂದುಳಿದ ವರ್ಗಗಳಿಗೆ ಸಂವಿಧಾನಬದ್ಧ ಹಕ್ಕು ನೀಡಿದೆ ಎಂದರು.

ಪಾಟ್ನಾದಲ್ಲಿ ನಡೆಯಲಿರುವ ಓಬಿಸಿ ಅಧಿವೇಶನಕ್ಕೆ ರಾಜ್ಯದಿಂದ 75 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಓಬಿಸಿ ಮೋರ್ಚಾ ಅಧ್ಯಕ್ಷ ಧಾರಾಸಿಂಗ್ ಚೌವ್ಹಾಣ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸುಧಾ ಯಾದವ್ ಭಾಗವಹಿಸಲಿದ್ದಾರೆಂದು ಹೇಳಿದರು.

ದ್ವೇಷದ ರಾಜಕಾರಣಿ: ಆಡಿಯೋ ಪ್ರಕರಣ ಸಂಬಂಧ ಸಿಟ್ ತನಿಖೆ ಮೂಲಕ ಜೆಡಿಎಸ್ ಮುಗಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನು ಸಿಲುಕಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಆಡಿಯೋ ಪ್ರಕರಣದಿಂದ ಬಿ.ಎಸ್.ಯಡಿಯೂರಪ್ಪನವರು ಅನಾಯಾಸವಾಗಿ ಹೊರಬರಲಿದ್ದಾರೆ. ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News