ಸಂವಿಧಾನ ಕುರಿತು ಸಾಮಾನ್ಯರಿಗೆ ಇರುವ ಜ್ಞಾನ ಬುದ್ಧಿವಂತರಿಗಿಲ್ಲ: ಬರಗೂರು ರಾಮಚಂದ್ರಪ್ಪ

Update: 2019-02-14 17:38 GMT

ಬೆಂಗಳೂರು, ಫೆ.14: ಸಂವಿಧಾನದ ಕುರಿತು ಸಾಮಾನ್ಯ ಜನರಿಗೆ ಇರುವ ಜ್ಞಾನ ಬುದ್ಧಿವಂತರೆನಿಸಿಕೊಂಡ ಕೆಲವರಿಗೆ ಇಲ್ಲ ಎಂದು ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು.

ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಕರ್ನಾಟಕ ಬೌದ್ಧ ಸಮಾಜ ಆಯೋಜಿಸಿದ್ದ, ಸಂವಿಧಾನ ದಿನಾಚರಣೆ ಪ್ರಯುಕ್ತ ‘ಸಮಕಾಲೀನ ಭಾರತದಲ್ಲಿ ದಮನಿತ ಬಹುಜನ ಸಮುದಾಯಗಳ ಸವಾಲುಗಳು ಮತ್ತು ಭಾರತದ ಸಂವಿಧಾನ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತವಾಗಿ ಸಂವಿಧಾನವನ್ನು ಬದಲಾಯಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಸಂವಿಧಾನದ ಪ್ರಾಮುಖ್ಯತೆಯ ಕುರಿತು ಪೂರ್ಣ ಮಾಹಿತಿಯನ್ನು ಹೊಂದಿರುವ ವ್ಯಕ್ತಿಗಳು ಈ ರೀತಿ ಹೇಳಲು ಸಾಧ್ಯವಿಲ್ಲ. ದೇಶದಲ್ಲಿರುವ ಸಾಮಾನ್ಯ ಜನರಿಗೆ ಸಂವಿಧಾನದ ಕುರಿತು ಇರುವ ಸಾಮಾನ್ಯ ಜ್ಞಾನ ಇಂದಿನ ಬುದ್ಧಿವಂತರೆನಿಸಿಕೊಂಡವರಿಗಿಲ್ಲ.

ದೇಶದ ರಾಜಕೀಯ ಕ್ಷೇತ್ರದಲ್ಲೂ ಸಂವಿಧಾನದ ರಕ್ಷಣೆಯಾಗುತ್ತಿಲ್ಲ. ಸಂವಿಧಾನದ ರಕ್ಷಣೆ ತಾತ್ವಿಕವಾಗಿರಬೇಕೆ ಹೊರತು ತಾಂತ್ರಿಕವಾಗಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

 ಸಮಾಜದಲ್ಲಿ ಹಿಂದುಳಿದವರು, ಅಲ್ಪಾಸಂಖ್ಯಾತರು ಹೆಚ್ಚಿನ ರೀತಿಯಲ್ಲಿ ಶೋಷಣೆಗಳು ನಡೆಯುತ್ತಿದೆ. ಇದಕ್ಕೆ ಶೋಷಕ ವರ್ಗಗಳು ಸಂಘಟನೆಯಾಗಿದ್ದು ಶೋಷಿತ ವರ್ಗಗಳ ವಿಘಟನೆ ಮುಖ್ಯ ಕಾರಣವಾಗಿದೆ. ನಾವು ಸಮಸ್ಯೆಗಳ ಕುರಿತು ಚಿಂತಿಸುತ್ತಿದ್ದೇವೆಯೇ ಹೊರತು ಸಮಸ್ಯೆಗೆ ಕಾರಣವೇನೆಂಬುದರ ಬಗ್ಗೆ ಅರಿಯಲು ಮುಂದಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಭಾಷೆ, ಧರ್ಮ, ಸಂಸ್ಕೃತಿಯ ಅಪವಾಕ್ಯವಾಗುತ್ತಿದ್ದು ರಾಜಕೀಯ ವಿಚಾರಕ್ಕಾಗಿ ಇವುಗಳನ್ನು ಬಳಸುತ್ತಿದ್ದಾರೆ. ನಾವೆಲ್ಲರೂ ಒಂದೇ ಸಮಾಜವೆನ್ನುವ ಬದಲು, ಸಮಾಜ ಎಂದರೆ ಒಂದು ಸಮುದಾಯ ಎನ್ನುವ ಮಟ್ಟಿಗೆ ದೇಶ ಬದಲಾಗಿದೆ.

ಇಂತಹ ಸಂದರ್ಭದಲ್ಲಿ ಸಂವಿಧಾನದ ಮಹತ್ವದ ಕುರಿತು ಜನರಿಗೆ ಮಾಹಿತಿ ನೀಡುವುದು ಅನಿವಾರ್ಯವಾಗಿದೆ. ಸಂವಿಧಾನವನ್ನು ಉಳಿಸುವುದೆಂದರೆ ಸಂವಿಧಾನದ ಪ್ರತಿಯನ್ನು ಉಳಿಸುವುದಲ್ಲ ಸಂವಿಧಾನದ ತತ್ವವನ್ನು ಉಳಿಸುವುದು ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಬರಗೂರು ನುಡಿದರು.

ಚಿಂತಕ, ಬಹುಭಾಷ ನಟ ಪ್ರಕಾಶ್ ರೈ ಮಾತನಾಡಿ, ಇತಿಹಾಸವನ್ನು ಅರ್ಥಮಾಡಿಕೊಳ್ಳದಿದ್ದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ, ಸಮಸ್ಯೆಗಳು ಹೆಚ್ಚಾದಂತೆ ಜನರು ಭ್ರಷ್ಟರಾಗುತ್ತಾ ಸಾಗುತ್ತಾರೆ. ಇಂತಹ ಸನ್ನಿವೇಶವನ್ನು ನಾವು ರಾಜಕೀಯ ಕ್ಷೇತ್ರದಲ್ಲಿ ನೋಡಬಹುದು. ಒಂದು ರೀತಿಯಲ್ಲಿ ಹೇಳುವುದಾದರೆ ಚುನಾವಣೆ ಪ್ರಕ್ರಿಯೆಯನ್ನು ಭ್ರಷ್ಟಾಚಾರದ ಮೂಲ ಎಂದು ಕರೆಯಬಹುದು.

ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗಿದೆ. ಜನರು ಕೂಡ ಯಾವುದೇ ಆಮಿಷಗಳಿಗೆ ಬಲಿಯಾಗದೆ ಜಾತಿ, ಧರ್ಮ, ಭಾಷೆಗಳ ಮೂಲಕ ಮಾಡುವ ಮೋಸಕ್ಕೆ ಒಳಗಾಗದೆ ದೇಶವನ್ನು ಮುನ್ನಡೆಸುವ ನಾಯಕನನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಸಿ.ಬಿ.ಹೊನ್ನು ಸಿದ್ದಾರ್ಥ ಅವರ ನಾಗಲೋಕ ಶಿಲ್ಪವನ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ, ಹೋರಾಟಗಾರ್ತಿ ಕೆ.ನೀಲಾ ಸೇರಿದಂತೆ ಪ್ರಮುಖರಿದ್ದರು.

ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ಇಂದು ಜಾತಿಗೆ ಸೀಮಿತವಾದ ಸಂವಿಧಾನವೆಂದು ವದಂತಿ ಹಬ್ಬಿರುವುದು ಬೇಸರ ತಂದಿದೆ. ಭಾರತದ ಸಂವಿಧಾನ ಭಾರತೀಯರಿಗಾಗಿ ಇರುವಂತಹ ಸಂವಿಧಾನವೇ ಹೊರತು, ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ ಎಂಬುದನ್ನು ಅರಿಯುವುದು ಅನಿವಾರ್ಯವಾಗಿದೆ.

ಪ್ರಕಾಶ್  ರೈ ಬಹುಭಾಷಾ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News