ಪ್ರೇಮಿಗಳ ರಕ್ಷಣೆಗೆ ವಿಶೇಷ ಕಾಯಿದೆ ಅವಶ್ಯ: ವಾಟಾಳ್ ನಾಗರಾಜ್

Update: 2019-02-14 17:50 GMT

ಬೆಂಗಳೂರು, ಫೆ.14: ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರೇಮಿಗಳ ರಕ್ಷಣೆಗಾಗಿ ವಿಶೇಷ ಕಾಯಿದೆಯನ್ನು ಅನುಷ್ಠಾನಗೊಳಿಸಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ಕಬ್ಬನ್ ಉದ್ಯಾನವನದಲ್ಲಿ ರಾಜ ಹೆಸರಿನ ಗಂಡು ಕುದುರೆ, ರಾಣಿ ಹೆಸರಿನ ಹೆಣ್ಣು ಕುದುರೆಗೆ ವಿವಾಹ ನೇರವೇರಿಸಿ ಮಾತನಾಡಿದ ಅವರು, ಪ್ರೀತಿ- ಪ್ರೇಮ ಕೇವಲ ಮನುಷ್ಯನಿಗೆ ಸೀಮಿತವಲ್ಲ. ಪ್ರಾಣಿ ಪಕ್ಷಿಗಳಿಗೂ ಪ್ರೀತಿ, ಪ್ರೇಮ ಉಂಟು, ಭಾವನೆಗಳುಂಟು. ಹೀಗಾಗಿ, ರಾಜ-ರಾಣಿ ಕುದುರೆಯ ಕೊರಳಿಗೆ ಹಾರ, ರಾಣಿಗೆ ತಾಳಿ, ರಾಜನಿಗೆ ಬಾಸಿಂಗ ಕಟ್ಟಿ. ಪ್ರೇಮಿಗಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಪ್ರೇಮಿಗಳಿಗೆ ಬೆಂಬಲ ನೀಡಿ ಎಂದು ಸರಕಾರವನ್ನು ಮನವಿ ಮಾಡಿದರು.

ಪ್ರೇಮ ಎಂಬುದು ಒಂದು ದಿನದ ಪ್ರೇಮ ಅಲ್ಲ. ಒಂದು ತಿಂಗಳ ಪ್ರೇಮವಲ್ಲ. ಇಡೀ ಜೀವನದುದ್ದಕ್ಕೂ ಪ್ರೀತಿ, ಪ್ರೇಮ, ಸಂಸಾರ ಸಾಮರಸ್ಯವಾಗಬೇಕು. ಪ್ರೇಮ ಆದರ್ಶವಾಗಬೇಕು ಎಂದು ಪ್ರೇಮಿಗಳಿಗೆ ಉಪದೇಶ ಹೇಳುವುದನ್ನು ಮರೆಯದ ಅವರು ಪ್ರೇಮಿಗಳ ದಿನದಂದು ಸರಕಾರ ರಜೆಯನ್ನು ಘೋಷಿಸಬೇಕೆಂದು ಒತ್ತಾಯ ಮಾಡಿದರು.

ಉದ್ಯಾನವನಕ್ಕೆ ಬಂದಿದ್ದ ಪ್ರೇಮಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಪ್ರೇಮಿಗಳಿಗೆ ಗುಲಾಬಿ ಹೂಗಳನ್ನು ನೀಡಿದರು. ಅಲ್ಲದೆ, ಬೆಳ್ಳಿ ರಥದ ಮುಂದೆ ಪ್ರೇಮಿಗಳ ಮೆರವಣಿಗೆ ಕಬ್ಬನ್ ಉದ್ಯಾನವನದ ಟೆನ್ನಿಸ್ ಕ್ಲಬ್ ಹತ್ತಿರದಿಂದ ಹೊರಟು ಮಹಾತ್ಮಗಾಂಧಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವುದು ಸರಿಯಾದ ಕ್ರಮವಲ್ಲ. ಪ್ರೇಮದ ಬಗ್ಗೆ ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕು. -ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News