ಶಾಸಕರ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ಆರೋಪ: ಬಿಜೆಪಿ ಶಾಸಕ ಅಶ್ವಥ್ ನಾರಾಯಣ ವಿರುದ್ಧ ಪ್ರತಿಭಟನೆ

Update: 2019-02-14 18:14 GMT

ಬೆಂಗಳೂರು, ಫೆ.14: ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಆಪರೇಷನ್ ಕಮಲದ ಬಿಜೆಪಿ ಕುದುರೆ ವ್ಯಾಪಾರದ ಮುಂಚೂಣಿಯಲ್ಲಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಕುವೆಂಪು ಪ್ರತಿಮೆ ಎದುರು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯ ಕರ್ತರು, ಕುದುರೆ ವ್ಯಾಪಾರದ ಅಣುಕು ಪ್ರದರ್ಶನ ಮಾಡುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದೊಂದು ತಿಂಗಳಿನಿಂದ ಕ್ಷೇತ್ರದ ಬಗ್ಗೆ ಗಮನ ಹರಿಸದೇ ಆಪರೇಷನ್ ಕಮಲದಲ್ಲಿ ವ್ಯಸ್ತರಾಗಿದ್ದಾರೆ. ಅಲ್ಲದೆ, ಆಪರೇಶನ್ ಕಮಲಕ್ಕೆ ದುಡ್ಡನ್ನು ಹಂಚಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಯಾವುದೇ ಗಮನ ಹರಿಸದೇ ಇರುವ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಅವರ ವಿರುದ್ದ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.

 ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಗಮನ ಹರಿಸಲಿ ಎಂದು ಚುನಾಯಿಸಿದ ಮತದಾರರ ಆಶೋತ್ತರಗಳಿಗೆ ಸ್ಪಂದಿಸದೆ, ಅಸಂವಿಧಾನಿಕ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. ಚುನಾಯಿತ ಪ್ರತಿನಿಧಿಗಳನ್ನೇ ಕೊಂಡು ಕೊಳ್ಳುವ ಸಂಪ್ರದಾಯಕ್ಕೆ ಮುಂದಾಗಿದ್ದಾರೆ. ಇಂತಹ ಕೀಳು ಮಟ್ಟಕ್ಕೆ ಇಳಿದಿರುವ ಶಾಸಕರ ಆಡಳಿತ ಈ ಕ್ಷೇತ್ರಕ್ಕೆ ಬೇಡ ಎಂದು ಕೆಂಗಲ್ ಶ್ರೀಪಾದ ರೇಣು ಹೇಳಿದರು.

ಪ್ರತಿಭಟನೆಯಲ್ಲಿ ಮಲ್ಲೇಶ್ವರಂ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್, ವಿಜಯ್, ಆಶೀಕ್ ಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News