ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ: ಎಸ್‌ಡಿಪಿಐ ಆರೋಪ

Update: 2019-02-14 18:16 GMT

ಬೆಂಗಳೂರು, ಫೆ.14: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೆ.8ರಂದು ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಹಾಗೂ ಬೌದ್ಧ ಧರ್ಮದವರಿಗೆ ಅನ್ಯಾಯವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2,300 ಕೋಟಿ ರೂ.ಗಳನ್ನು ನೀಡಿದ್ದರು. ಆದರೆ, ಪ್ರಸ್ತುತ ಬಜೆಟ್‌ನಲ್ಲಿ ಕುಮಾರಸ್ವಾಮಿಯವರು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ 1 ಸಾವಿರ ಕೋಟಿಗೂ ಕಡಿಮೆ ಹಣವನ್ನು ನೀಡಲಾಗಿದೆ. ಅಲ್ಪಸಂಖ್ಯಾತರು ರಾಜ್ಯದ ಜನಸಂಖ್ಯೆಯ ಶೇ.20ರಷ್ಟಿದ್ದು, ಈ ಸಣ್ಣ ಮೊತ್ತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧ ಅಸಾಧ್ಯವೆಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರಕಾರವು ಬಿಜೆಪಿ ಮತ್ತು ಕೋಮುವಾದಿ ಶಕ್ತಿಗಳ ಒತ್ತಡಕ್ಕೆ ಮಣಿದು ಈ ರೀತಿಯ ತಾರತಮ್ಯ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳಿಗೆ ಅಲ್ಪಸಂಖ್ಯಾತರು ಬೆಂಬಲಿಸಬೇಕೆಂದರೆ 10 ಸಾವಿರ ಕೋಟಿ ರೂ. ಬಜೆಟ್ ನೀಡಿ ಆ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ಅಲ್ಪಸಂಖ್ಯಾತರ ವಿಶ್ವಾಸ ಗಳಿಸುವ ಕೆಲಸವಾಗಬೇಕೆಂದು ಆಗ್ರಹಿಸಿದರು.

ಬೇಡಿಕೆಗಳು

► ಸಾಚಾರ್ ಹಾಗೂ ಮಿಶ್ರ ಆಯೋಗದ ಶಿಫಾರಸ್ಸು ಅನುಷ್ಠಾನ.

► ಹಿಂದುಳಿದ ಮುಸ್ಲಿಮರ ಅಭಿವೃದ್ಧಿಗೆ 10 ಸಾವಿರ ಕೋಟಿ.

► ಸರಕಾರಿ ಸ್ವಾಮ್ಯದ ಉದ್ಯಮ ಪುನಶ್ಚೇತನ.

► ಜನಸಂಖ್ಯೆ ಅನುಪಾತದಂತೆ ಪ್ರಾದೇಶಿಕ ಅಸಮತೋಲನ ತೊಲಗಿಸಿ.

► ವಿಷಬೀಜ ಬಿತ್ತುವ ಕೋಮುವಾದಿ ಶಕ್ತಿ ದುರ್ಬಲಗೊಳಿಸಿ.

► ಶಿಕ್ಷಣ ಸಂಸ್ಥೆ ಹಾಗೂ ಉರ್ದು ಶಾಲೆಗಳ ಗುಣಮಟ್ಟ ಕಾಪಾಡಿ.

► ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಕೇರಳ ಮಾದರಿ ಸಂಬಳ ನೀಡಿ

ಬಿಜೆಪಿಯನ್ನು ಸೋಲಿಸಬೇಕೆಂದು ಮುಸ್ಲಿಮರು ಶೇ.95 ಮತಗಳನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ನೀಡಿದ್ದೆವು. ಆದರೆ, ಸಮ್ಮಿಶ್ರ ಸರಕಾರ ಮುಸ್ಲಿಂ ಮತದಾರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

-ಅಫ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News