ಪಾಕ್ ಗೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಸ್ಥಾನಮಾನ ಹಿಂಪಡೆದ ಭಾರತ

Update: 2019-02-15 16:09 GMT

ಹೊಸದಿಲ್ಲಿ/ ಶ್ರೀನಗರ,ಫೆ.15: ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಭದ್ರತಾಪಡೆಗಳ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 44 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆಗೆ, ನೆರೆಯ ರಾಷ್ಟ್ರವಾದ ಪಾಕಿಸ್ತಾನವನ್ನು ನೇರವಾಗಿ ಹೊಣೆಗಾರನನ್ನಾಗಿ ಮಾಡಿರುವ ಭಾರತವು, ಆ ದೇಶಕ್ಕೆ ನೀಡಿರುವ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ರದ್ದುಪಡಿಸಿದೆ.

ನರೇಂದ್ರ ಮೋದಿ ಹಾಗೂ ಸಂಪುಟದ ಉನ್ನತ ಸಚಿವರು ಭದ್ರತಾ ಪರಾಮರ್ಶನಾ ಸಭೆಯನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

 ಪ್ರಧಾನಿ ನಿವಾಸದಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆ (ಸಿಸಿಎಸ್)ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದುಪಡಿಸಲಾಗಿದೆ ಹಾಗೂ ಆ ದೇಶವನ್ನು ‘ಸಂಪೂರ್ಣವಾಗಿ ಏಕಾಂಗಿಯಾಗಿರಿಸಲು’ ಸಾಧ್ಯವಿರುವ ಎಲ್ಲಾ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಪರಮಾಪ್ತ ರಾಷ್ಟ್ರದ ಸ್ಥಾನಮಾನ

 ವಿಶ್ವವಾಣಿಜ್ಯ ಸಂಸ್ಥೆ (ಡಬ್ಲುಟಿಓ)ಯ ಪಾಲುದಾರ ರಾಷ್ಟ್ರಗಳ ನಡುವೆ ತಾರತಮ್ಯರಹಿತವಾದ ವಾಣಿಜ್ಯ ಪಾಲುದಾರಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತವು ಪಾಕ್‌ಗೆ ‘ಪರಮಾಪ್ತ ರಾಷ್ಟ್ರ’ ಸ್ಥಾನಮಾನವನ್ನು 1996ರಲ್ಲಿ ನೀಡಲಾಗಿತ್ತು.

ಇನ್ನೊಂದು ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹೊಂದುವ ಮೂಲಕ ಪಾಕಿಸ್ತಾಕ್ಕೆ ಭಾರತದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಕ್ಕೆ ರಿಯಾಯಿತಿಗಳು, ಸವಲತ್ತುಗಳನ್ನು ಪಡೆಯುತ್ತಿತ್ತು. ಅಲ್ಲದೆ ಕೆಲವು ವಾಣಿಜ್ಯ ಒಪ್ಪಂದಗಳ ಶರತ್ತುಗಳಿಂದ ರಿಯಾಯಿತಿಗಳು ಕೂಡಾ ಅದಕ್ಕೆ ಲಭ್ಯವಾಗುತ್ತಿತ್ತು.

 ಇದೀಗ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಳೆದುಕೊಳ್ಳುವುದರಿಂದ ಪಾಕಿಸ್ತಾನವು ಈ ಎಲ್ಲಾ ವಾಣಿಜ್ಯ ಸವಲತ್ತುಗಳನ್ನು ಭಾರತದಲ್ಲಿ ಕಳೆದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News