ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಸಚಿವ ಸಾ.ರಾ.ಮಹೇಶ್

Update: 2019-02-15 15:57 GMT

ಬೆಂಗಳೂರು, ಫೆ.15: ಪ್ರವಾಸೋದ್ಯಮದ ಅಭಿವೃದ್ಧಿಗೆ ಹಾಗೂ ಯುವಜನತೆಗೆ ಉದ್ಯೋಗ ಒದಗಿಸಲು ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಶುಕ್ರವಾರ ನಗರದ ಅರಮನೆ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಇತರ ಪ್ರವಾಸಿ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಯಾಣ ಹಾಗೂ ಪ್ರವಾಸೋದ್ಯಮ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಬಾದಾಮಿ, ಐಹೊಳೆ, ಬನಶಂಕರಿ ತಾಣಗಳ ಅಭಿವೃದ್ಧಿಗಾಗಿ 75 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಶ್ರವಣಬೆಳಗೊಳ, ಹಂಪೆ, ಬಾದಾಮಿ, ಪಟ್ಟದಕಲ್ಲು, ಮೈಸೂರು ಸೇರಿ ಒಟ್ಟು 20 ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಹೊರ ದೇಶದಿಂದ ರಾಜ್ಯಕ್ಕೆ 22 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅದರ ಸಂಖ್ಯೆ ಹೆಚ್ಚಿಸುವ ಯೋಜನೆ ಇದೆ. ನಗರದಲ್ಲಿ ಪ್ರತಿ ವರ್ಷ ಪ್ರವಾಸೋದ್ಯಮ ಮೇಳ ನಡೆಸಲು ಇಲಾಖೆ ನಿರ್ಧರಿಸಿದ್ದು, ಫೆ.25ರಂದು ವಿಶ್ವದ 25 ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಿ, ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳದಲ್ಲಿ ಹಲವು ಪ್ರವಾಸ ಯೋಜನೆಗಳ ವ್ಯವಹಾರಸ್ಥರು ಒಂದೆಡೆ ಸೇರಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, 9 ದೇಶ, 15 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 165 ಪ್ರದರ್ಶಕರು ಮೇಳದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News