ಏರೋ ಶೋ ವಿಚಾರ: ಹೋರ್ಡಿಂಗ್ಸ್ ಅಳವಡಿಸಲು ಎಚ್‌ಎಎಲ್‌ಗೆ ಅನುಮತಿ ನೀಡಿದ ಹೈಕೋರ್ಟ್

Update: 2019-02-15 16:02 GMT

ಬೆಂಗಳೂರು, ಫೆ.15: ನಗರದ ಯಲಹಂಕ ವಾಯುನೆಲೆಯಲ್ಲಿ ಫೆ.20ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಏರ್ ಇಂಡಿಯಾ 2019 ವೈಮಾನಿಕ ಪ್ರದರ್ಶನದ ನಿಮಿತ್ತ ನಗರದ ಹಲವೆಡೆ ತಾತ್ಕಾಲಿಕ ಹೋರ್ಡಿಂರ್ಗ್ಸ್ ಅಳವಡಿಸಲು ಎಚ್‌ಎಎಲ್‌ಗೆ (ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್) ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಈ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಬ್ರಿಗೇಡ್ ರಸ್ತೆ, ಯಲಹಂಕ ಕೋಗಿಲು ಜಂಕ್ಷನ್, ಯಲಹಂಕ ಎನ್‌ಇಎಸ್ ಬಸ್ ನಿಲ್ದಾಣ, ಏರ್‌ಪೋರ್ಟ್‌ನಿಂದ ಒಳಬರುವ ಮತ್ತು ಹೊರಹೋಗುವ ಹಾಗೂ ಲಾಲ್‌ಬಾಗ್ ಜಂಕ್ಷನ್‌ಗಳಲ್ಲಿ(ಪಾಸ್‌ಪೋರ್ಟ್ ಕಚೇರಿ ಸಮೀಪ) ಜಾಹೀರಾತು ಫಲಕಗಳನ್ನು ಅಳವಡಿಸಲು ನ್ಯಾಯಪೀಠ ಅನುಮತಿ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶೀನಿಧಿ, ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವಂತೆ ಎಚ್‌ಎಎಲ್ ಬಿಬಿಎಂಪಿಗೆ ಮನವಿ ನೀಡಿದೆ. ಏರ್ ಶೋ ಮುಗಿದ ಕೂಡಲೇ ತೆರವುಗೊಳಿಸುತ್ತೇವೆ ಎಂದೂ ತಿಳಿಸಿದೆ. ಹೀಗಾಗಿ, ಅನುಮತಿ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಜಾಹೀರಾತು ಫಲಕ ಪ್ರದರ್ಶಿಸಲು ಅನುಮತಿ ನೀಡಿತು. ಫೆ.20 ರಿಂದ 24 ವರೆಗೂ ಏರೋ ಶೋ ನಡೆಯಲಿದೆ.

ಅನಧಿಕೃತ ಜಾಹೀರಾತು: ಕೋರಮಂಗಲ ಪಿವಿಆರ್ ಸಿನಿಮಾ, ಜಾನ್ಸನ್ ಮಾರುಕಟ್ಟೆ ಮತ್ತು ಅರಮನೆ ರಸ್ತೆಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶ್ರೀನಿಧಿ, ಒಂದು ವೇಳೆ ಅನಧಿಕೃತ ಫಲಕಗಳನ್ನು ಅಳವಡಿಸಿದ್ದರೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News