ಬಿಡಾಡಿ ಹಂದಿ ಹಿಡಿಯುವುದಕ್ಕೆ ತಡೆ ನೀಡಿದ ಹೈಕೋರ್ಟ್

Update: 2019-02-15 16:05 GMT

ಬೆಂಗಳೂರು, ಫೆ.15: ಪಾಲಿಕೆಯ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಬಿಡಾಡಿ ಹಂದಿಗಳನ್ನು ಹಿಡಿದು ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಕುರಿತು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಆನಂದಕುಮಾರ್ ಏಕಲವ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ.ಪಿ.ಎಸ್. ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಹಾನಗರ ಪಾಲಿಕೆ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆ ನೀಡಿತು.

ಅಲ್ಲದೇ ಅರ್ಜಿಗೆ ಸಂಬಂಧಿಸಿದಂತೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಉಳಿದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅಖಿಲ ಕರ್ನಾಟಕ ಕುಳುವ ಮಹಾಸಂಘವು ಪಾರಂಪರಿಕವಾಗಿ ಕರಕುಶಲತೆ ಹಾಗೂ ಹಂದಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಕೊರಮ-ಕೊರಚ, ಕೊರವ, ಹಂದಿ ಜೋಗಿ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ. ಅರಣ್ಯ ಪ್ರದೇಶ ಹಾಗೂ ಬಿದಿರು ಬೆಳೆಯುವ ಜಾಗ ಕ್ಷೀಣಿಸಿ ಕಚ್ಚಾ ಸಾಮಗ್ರಿಗಳ ಕೊರತೆಯ ಹಿನ್ನೆಲೆಯಲ್ಲಿ ಈ ಜನಾಂಗಗಳು ಕರಕುಶಲತೆ ಬಿಟ್ಟು ಸದ್ಯ ಹಂದಿ ಸಾಗಾಣಿಕೆ ಮಾತ್ರ ಅವಲಂಬಿಸಿದ್ದಾರೆ. ಈ ಜನಾಂಗಗಳ ಆರ್ಥಿಕತೆ ಸಂಪೂರ್ಣವಾಗಿ ಹಂದಿ ಸಾಗಾಣಿಕೆ ಮೇಲೆ ನಿಂತಿದೆ. ಮಹಾನಗರ ಪಾಲಿಕೆ ಆಯುಕ್ತರ ಈ ಆದೇಶದಿಂದ ಹಂದಿಗಳ ಸಂಖ್ಯೆ ಕ್ಷೀಣಿಸುವುದರ ಜೊತೆಗೆ, ಅದನ್ನು ನಂಬಿದ ಸಮುದಾಯಗಳ ಬದುಕಿಗೆ ಪೆಟ್ಟು ಬೀಳುತ್ತದೆ. ಅಲ್ಲದೇ ಹಿಡಿದ ಹಂದಿಗಳನ್ನು ಅಕ್ರಮವಾಗಿ ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ಹೀಗಾಗಿ, ಪಾಲಿಕೆ ಆಯುಕ್ತರ ಆದೇಶ ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಪಾಲಿಕೆಯ ವಾರ್ಡ್‌ಗಳಲ್ಲಿನ ಬಿಡಾಡಿ ಹಂದಿಗಳನ್ನು ಹಿಡಿದು ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು 2018ರ ಅ.26ರಂದು ಹೊರಡಿಸಿದ ಆದೇಶ ರದ್ದುಗೊಳಿಸಬೇಕು. ಅಖಿಲ ಕರ್ನಾಟಕ ಕುಳುವ ಮಹಾಸಂಘದ ಸದಸ್ಯರಿಗೆ ಸೇರಿದ ಈಗಾಗಲೇ ಹಿಡಿದು ಸ್ಥಳಾಂತರಿಸುವ ಹಂದಿಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡುವಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು. ಅಲ್ಲದೇ ತಮಗೆ ಸೇರಿದ ಹಂದಿಗಳನ್ನು ಸಾಕಲು ಸಂಘದ ಸದಸ್ಯರಿಗೆ ಸೂಕ್ತ ಹಾಗೂ ಸುರಕ್ಷಿತ ಸ್ಥಳ ಒದಗಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥಗೊಳ್ಳುವವರೆಗೆ ಪಾಲಿಕೆ ಆಯುಕ್ತರ ಆದೇಶಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿಯನ್ನೂ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News