ನನ್ನ ಪತಿ ದೇಶವನ್ನು ರಕ್ಷಿಸುತ್ತಿದ್ದರು, ಆದರೆ ಅವರಿಗೆ ರಕ್ಷಣೆ ಸಿಗಲಿಲ್ಲ: ಹುತಾತ್ಮ ಯೋಧ ಗುರು ಪತ್ನಿ

Update: 2019-02-15 16:14 GMT

ಬೆಂಗಳೂರು, ಫೆ.16: “ನನ್ನ ಪತಿಯನ್ನು ಯಾವ ರೀತಿಯಲ್ಲಿ ಕೊಂದರೋ ಅದೇ ರೀತಿಯಲ್ಲಿ ಅವರನ್ನು (ಉಗ್ರರನ್ನು) ಕೂಡಾ ಕೊಂದುಹಾಕಿ”.... ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಂಡ್ಯ ಜಿಲ್ಲೆಯ ಸಿಆರ್‌ ಪಿಎಫ್ ಯೋಧ ಗುರು ಅವರ ಪತ್ನಿ ಕಲಾವತಿ, ಉಮ್ಮಳಿಸಿ ಬರುತ್ತಿರುವ ದುಃಖದ ನಡುವೆ ಆಕ್ರೋಶಭರಿತವಾಗಿ ಹೇಳಿದ ಮಾತುಗಳಿವು.

“ಪತಿಯ ನಿಧನದ ಸುದ್ದಿ ನನಗೆ ರಾತ್ರಿ 11:00 ಗಂಟೆಯ ವೇಳೆಗಷ್ಟೇ ತಿಳಿದುಬಂದಿತೆಂದು” ಕಲಾವತಿ ಹೇಳುತ್ತಾರೆ. ''ನಿನ್ನೆ ನನ್ನ ಪತಿ ಫೋನ್ ಕರೆ ಮಾಡಿದ್ದರು. ಆದರೆ ನಾನು ಮನೆಕೆಲಸದಲ್ಲಿ ನಿರತಳಾಗಿದ್ದರಿಂದ ಆ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಮತ್ತೆ ಅವರಿಗೆ ನಾನು ಮರಳಿ ಕರೆ ಮಾಡಿದಾಗ ಅವರ ಫೋನ್‌ ನ್ನು ತಲುಪಲಾಗಲಿಲ್ಲ. ನನಗೆ ಅವರೊಂದಿಗೆ ಕೊನೆಯ ಬಾರಿ ಮಾತನಾಡುವ ಅವಕಾಶ ದೊರೆತಿತ್ತು. ಅದರೆ ನನ್ನ ಪತಿಯ ವಿಧಿಯಂತೆ, ನನ್ನ ವಿಧಿಯೂ ಅತ್ಯಂತ ಘೋರವಾಗಿದೆ'' ಎಂದು ಆಂಗ್ಲ ಸುದ್ದಿವಾಹಿನಿಯೊಂರ ಜತೆ ಕಲಾವತಿ ಕಣ್ಣೀರು ಸುರಿಸುತ್ತಾ ಹೇಳಿದರು.
“ನನ್ನ ಪತಿಯನ್ನು ನನಗೆ ವಾಪಸ್ ತಂದುಕೊಡಿ. ಗಡಿಯನ್ನು ಕಾಯುತ್ತಿರುವವರು ಇದೇ ರೀತಿ ಸದಾ ಕಾಲವೂ ಸಾಯುತ್ತಲೇ ಇರುವುದಾದರೆ, ಅವರನ್ನು ಮನೆಗೆ ವಾಪಸ್ ಕಳುಹಿಸಿ, ಕನಿಷ್ಠ ಪಕ್ಷ ಅವರು ಮನೆಯವರ ಪಾಲನೆಯನ್ನಾದರೂ ಮಾಡಿಯಾರು” ಎಂದರು. ಗುರು ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದರು. ತಾನು ಪುಲ್ವಾಮಾಕ್ಕೆ ತೆರಳುತ್ತಿರುವುದನ್ನು ಅವರು ತಿಳಿಸಲೇ ಇರಲಿಲ್ಲವೆಂದು ಕಲಾವತಿ ಆಳುತ್ತಾ ಹೇಳಿದರು.

“ನನ್ನ ಪತಿಯು ದೇಶದ ವಿವಿಧ ಭಾಗಗಳಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಕರ್ತವ್ಯ ನಿರ್ವಹಿಸಿದ್ದಾರೆ. ಗಡಿರಕ್ಷಣೆಯ ತನ್ನ ಕರ್ತವ್ಯದಲ್ಲಿನ ಸಂಕಷ್ಟಗಳ ಬಗ್ಗೆ ಅವರು ನನ್ನೊಂದಿಗೆ ಹೇಳಿಕೊಳ್ಳುತ್ತಿದ್ದರು. ದೇಶವನ್ನು ರಕ್ಷಿಸುತ್ತಿದ್ದುದ್ದಾಗಿ ನನ್ನ ಪತಿಯ ಬಗ್ಗೆ ನನ್ನ ತೀವ್ರ ಹೆಮ್ಮೆಯಿದೆ. ಆದರೆ ಅವರಿಗೆ ಅಗತ್ಯವಿದ್ದಾಗ ಯಾವುದೇ ರಕ್ಷಣೆ ದೊರೆಯಲಿಲ್ಲ” ಎಂದು ಕಲಾವತಿ ಹೇಳಿದರು.

ಕಲಾವತಿಯವರಿಗೆ ಸರಕಾರಿ ಉದ್ಯೋಗವನ್ನು ನೀಡಲಾಗುವುದೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಿ.ಎಸ್.ಪುಟ್ಟರಾಜು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಬಿ,.ಎಸ್. ಯಡಿಯೂರಪ್ಪ, ಹುತಾತ್ಮ ಸೈನಿಕ ಗುರು ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News