ಎಸೆಸ್ಸೆಲ್ಸಿ ಪರೀಕ್ಷೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಜ್ಜು

Update: 2019-02-15 16:20 GMT

ಬೆಂಗಳೂರು, ಫೆ.15: ಪ್ರಸ್ತುತ ಶೈಕ್ಷಣಿಕ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 21 ರಿಂದ ಎಪ್ರಿಲ್ 4ರವರೆಗೆ ಜರುಗಲಿದ್ದು, ಈ ಬಾರಿ ನಡೆಯಲಿರುವ ಪರೀಕ್ಷೆಗೆ ಕರ್ನಾಟಕ ರಾಜ್ಯ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ರಾಜ್ಯಾದ್ಯಂತ ಒಟ್ಟು 14,454 ಶಾಲೆಗಳಿಂದ 8,41,649 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ 2,847 ಕೇಂದ್ರಗಳಲ್ಲಿ ನಡೆಯಲಿದೆ. 1,140 ಸರಕಾರಿ ಪರೀಕ್ಷಾ ಕೇಂದ್ರಗಳು, 1,124 ಸರಕಾರಿ ಅನುದಾನಿತ ಕೇಂದ್ರಗಳು ಹಾಗೂ 583 ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದರಲ್ಲಿ 46 ಸೂಕ್ಷ್ಮ ಪರೀಕ್ಷಾ ಕೇಂದ್ರಗಳು, 7 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಉಳಿದಂತೆ 2,794 ಸಾಮಾನ್ಯ ಪರೀಕ್ಷಾ ಕೇಂದ್ರಗಳಾಗಿರುತ್ತವೆ. ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಭದ್ರತೆಯ ದೃಷ್ಟಿಯಿಂದ 2,630 ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ 217 ಕೇಂದ್ರಗಳಿಗೆ ಶೀಘ್ರವಾಗಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷಾರ್ಥಿಗಳಿಗೆ ಡಿಜಿಟಲ್ ಹಾಗೂ ಸ್ಮಾರ್ಟ್ ವಾಚು, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧ ಹೇರಲಾಗಿದೆ. ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಿಶೇಷವಾಗಿ ಗುರುತಿನ ಚೀಟಿ ನೀಡಲಾಗಿದೆ. ಭದ್ರತೆಗಾಗಿ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ರವಾನಿಸಲಾಗಿದೆ. ಪರೀಕ್ಷಾ ಮೌಲ್ಯ ಮಾಪನ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅಂಕಗಳನ್ನು ನಮೂದಿಸುವುದಕ್ಕೆ ಅವಕಾಶ ನೀಡಿದ್ದು, ಮರು ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳ ಪಡೆಯುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News