ವಿ.ಶಶಿಧರ್ ಬಂಧನ ಪ್ರಕರಣ: ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2019-02-15 16:22 GMT

ಬೆಂಗಳೂರು, ಫೆ.15: ಅಖಿಲ ಕರ್ನಾಟಕ ಪೊಲೀಸ್ ಮಹಾಸಭಾದ ಅಧ್ಯಕ್ಷ ವಿ.ಶಶಿಧರ್ ಅವರನ್ನು ಬಂಧನದಲ್ಲಿರಿಸಲಾಗಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಆರೋಪಿಯನ್ನು ಈಗಾಗಲೇ ಪೊಲೀಸರು ಅಧೀನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಿಂದ ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು. 

ಈ ಸಂಬಂಧ ಶಶಿಧರ್ ಪತ್ನಿ ಪೂರ್ಣಿಮಾ ಶಶಿಧರ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿತು. ಪೊಲೀಸರು ಈಗಾಗಲೇ ಆರೋಪಿಯನ್ನು ಅಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದರಿಂದ ಈ ವಿಚಾರದಲ್ಲಿ ನ್ಯಾಯಪೀಠ ಮಧ್ಯಪ್ರವೇಶಿಸುವುದಿಲ್ಲ. ಹೀಗಾಗಿ, ಅಧೀನ ನ್ಯಾಯಾಲಯದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು ಎಂದು ಅರ್ಜಿದಾರರಿಗೆ ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣವೇನು: ಅಖಿಲ ಕರ್ನಾಟಕ ಪೊಲೀಸ್ ಮಹಾಸಭಾದ ಅಧ್ಯಕ್ಷ ವಿ.ಶಶಿಧರ್ ಅವರು ಬಜೆಟ್ ಮಂಡನೆಯಾದ ದಿನ ಫೇಸ್‌ಬುಕ್‌ನಲ್ಲಿ ಸಮ್ಮಿಶ್ರ ಸರಕಾರದ ವಿರುದ್ಧ ಪೊಲೀಸರಿಗೆ ಬಜೆಟ್‌ನಲ್ಲಿ ಅನ್ಯಾಯ ಮಾಡಿದ್ದಾರೆ. ಔರಾದ್ಕರ್ ವರದಿಯನ್ನು ಜಾರಿಗೆ ತರುತ್ತೇನೆ ಎಂದು ಪೊಲೀಸರಿಗೆ ಆಶ್ವಾಸನೆ ನೀಡಿ ವಂಚಿಸಿದ್ದಾರೆ ಎಂಬ ಆರೋಪ ಸೇರಿದಂತೆ ಇನ್ನಿತರ ಅಂಶಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಹೀಗಾಗಿ, ಸಿಸಿಬಿ ಪೊಲೀಸರು ಶಶಿಧರ್ ಅವರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News