ಎಸ್ಸಿ-ಎಸ್ಟಿ ಪಟ್ಟಿಯಿಂದ ಬಂಜಾರ ಸಮುದಾಯವನ್ನು ಕೈ ಬಿಡುವುದಿಲ್ಲ: ಪ್ರಿಯಾಂಕ್ ಖರ್ಗೆ

Update: 2019-02-15 16:32 GMT

ಬೆಂಗಳೂರು, ಫೆ.15: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಬಂಜಾರ ಸಮುದಾಯವನ್ನು ಕೈಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಂತ ಸೇವಾಲಾಲ್ ಅವರ 280ನೇ ಜಯಂತ್ಯುತ್ಸವ’ದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯವನ್ನು ಎಸ್ಸಿ-ಎಸ್ಟಿ ಪಟ್ಟಿಯಿಂದ ಕೈ ಬಿಡುವ ಸಂಬಂಧ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಹೇಳಿದರು.

ಸರಕಾರವು ಬಂಜಾರ ಸಮುದಾಯ ಹಾಗೂ ತಾಂಡಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಜನಾಂಗದ ಕಸೂತಿ ಕಲೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಕ್ರಮ ಕೈಗೊಂಡಿದೆ. ತಾಂಡಗಳ ರಸ್ತೆ ಅಭಿವೃದ್ಧಿಗಾಗಿ ‘ಸೇವಾಲಾಲ್ ಪ್ರಗತಿ ಕಾಲನಿ’ ಯೋಜನೆ ಜಾರಿಗೊಳಿಸಿದೆ. ಸೇವಾಲಾಲ್ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸರಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಎಸ್ಸಿ-ಎಸ್ಟಿ ಸಮುದಾಯದ ಯುವ ಜನಾಂಗದ ಅಭಿವೃದ್ಧಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪರಿಶಿಷ್ಟರನ್ನು ಉದ್ಯಮಿಗಳನ್ನಾಗಿ ಮಾಡುವ ಗುರಿ ಸರಕಾರದ ಮುಂದಿದ್ದು, ಈ ಉದ್ದೇಶದ ಈಡೇರಿಕೆಗಾಗಿ 800 ಕೋಟಿ ರೂ.ಮೀಸಲಿಡಲಾಗಿದೆ. ಶಿಕ್ಷಣದ ಜತಗೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲಿ ಎಂಬ ಕಾರಣಕ್ಕಾಗಿ ಪ್ರಬುದ್ಧ ಯೋಜನೆ, ಸಮೃದ್ಧಿ, ಐರಾವತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ನುಡಿದರು.

ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿದರು. ಮಾಜಿ ಸಚಿವರಾದ ಕೆ.ಶಿವಮೂರ್ತಿ, ರುದ್ರಪ್ಪ ಎಂ.ಲಮಾಣಿ, ಬಿ.ಟಿ.ಲಲಿತಾನಾಯಕ್ ವಿಧಾನಪರಿಷತ್‌ನ ಮಾಜಿ ಸದಸ್ಯೆ ಜಲಜಾನಾಯ್ಕೆ, ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ ಉಪಸ್ಥಿತರಿದ್ದರು.

ಸರಕಾರವು 180 ಕೋಟಿ ರೂ. ವೆಚ್ಚದಲ್ಲಿ ಸಂತ ಸೇವಾಲಾಲ್ ಜನ್ಮಿಸಿದ ಸ್ಥಳವಾದ ಸುರಗೊಂಡನಕೊಪ್ಪದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಆರಂಭವಾಗಲಿದೆ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ನಮ್ಮ ಮೂಲ ಮಂತ್ರವಾಗಿದೆ.

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News