ಜಲಮಂಡಳಿ: ಹೊಸ ಬೋರ್‌ವೆಲ್ ಅನುಮತಿಗೆ ಪ್ರತಿದಿನ ಆರು ಅರ್ಜಿ

Update: 2019-02-15 17:02 GMT

ಬೆಂಗಳೂರು, ಫೆ.15: ನಗರದಲ್ಲಿ ಅಂತರ್ಜಲದ ಮಟ್ಟ ತಗ್ಗುತ್ತಿದ್ದರೂ ಪ್ರತಿದಿನ ಕನಿಷ್ಠ ಆರು ಮಂದಿ ಹೊಸದಾಗಿ ಬೋರ್‌ವೆಲ್ ತೆಗೆಸಲು ಜಲಮಂಡಳಿಗೆ ಅನುಮತಿ ಕೋರಿ ಪತ್ರ ಬರೆಯುತ್ತಿದ್ದಾರೆ.

ಇದುವರೆಗೂ ನಗರದಲ್ಲಿ 3.7 ಲಕ್ಷ ಬೋರ್‌ವೆಲ್‌ಗಳಿವೆ. ಆದರೆ, ಅಕ್ರಮ ಬೋರ್‌ವೆಲ್ ತೆಗೆಯುವುದು ವಿಪರೀತವಾಗಿದ್ದು ಅದಕ್ಕೆ ಕಡಿವಾಣ ಹಾಕಲು ಜಲಮಂಡಳಿ ನಿರ್ಧರಿಸಿದೆ. ನಗರದಾದ್ಯಂತ ಶೇ.40ರಷ್ಟು ಮಂದಿಗೆ ಮಾತ್ರ ಬೋರ್‌ವೆಲ್ ತೆಗೆಯಲು ಅನುಮತಿ ನೀಡಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಜಲಮಂಡಳಿಯು 9,650 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 3,740 ಅರ್ಜಿಗಳಿಗೆ ಅವಕಾಶ ನೀಡಿ, ಉಳಿದ ಅರ್ಜಿಗಳನ್ನು ಅಂತರ್ಜಲ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಕಾವೇರಿ ನೀರು ಸರಬರಾಜು ಸೇರಿದಂತೆ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೆ, ಕಾರ್ಖಾನೆಗಳು ದೊಡ್ಡ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತಿದ್ದು, ಹೆಚ್ಚು ನೀರು ವ್ಯರ್ಥವಾಗುತ್ತಿದೆ. ಇದರ ನಡುವೆ ಅಧಿಕ ಬೋರ್‌ವೆಲ್‌ಗಳು ಕೊರೆದರೆ ಭೂಮಿ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ, ಸಾಧ್ಯವಾದಷ್ಟು ಕಡಿಮೆ ಜನರಿಗೆ ಅಷ್ಟೇ ಅವಕಾಶ ನೀಡಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಅಂಕಿ-ಅಂಶ: 2015-16ರಲ್ಲಿ 3,132 , 2017-18ರಲ್ಲಿ 2,212, 2017-18ರಲ್ಲಿ 2065 ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿ ನೀಡಲಾಗಿತ್ತು. 2018ರ ಏಪ್ರಿಲ್ ನಿಂದ 2019ರ ಜನವರಿವರೆಗೆ 2221 ಅರ್ಜಿ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News