ಮಂಡ್ಯದ ಯೋಧನ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ನಮನ

Update: 2019-02-16 14:10 GMT

ಬೆಂಗಳೂರು, ಫೆ. 16: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಗುಡಿಗೆರೆಯ ಯೋಧ ಎಚ್.ಗುರು ಅವರ ಪಾರ್ಥಿವ ಶರೀರವನ್ನು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿಶೇಷ ವಿಮಾನದಲ್ಲಿ ತರಲಾಯಿತು.

ಗೌರವ ಸಲ್ಲಿಕೆ: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಹತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ, ಗೃಹ ಸಚಿವ ಎಂ.ಬಿ. ಪಾಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮೇಯರ್ ಗಂಗಾಂಬಿಕೆ ಸೇರಿದಂತೆ ಗಣ್ಯರು ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು.

ಹೆಗಲು ಕೊಟ್ಟ ಗೃಹ ಸಚಿವ: ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಹತಾತ್ಮ ಯೋಧನ ಶವಪೆಟ್ಟಿಗೆಯನ್ನು ಸೇನಾ ವಾಹನದಲ್ಲಿ ಇರಿಸಲು ಶವಪೆಟ್ಟಿಗೆಗೆ ಪೊಲೀಸ್ ಸಿಬ್ಬಂದಿಯ ಜೊತೆ ಹೆಗಲುಕೊಟ್ಟರು.

ಸ್ಥಳದಲ್ಲಿದ್ದ ಅಭಿಮಾನಿಗಳು ದೇಶ ಹಾಗೂ ಯೋಧರ ಪರವಾಗಿ ಜಯಘೋಷ ಕೂಗಿದರು. ಆ ಬಳಿಕ ಸೇನಾ ವಾಹನದಲ್ಲಿ ಪಾರ್ಥಿವ ಶರೀರ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಈ ವೇಳೆ ಮಾರ್ಗಮಧ್ಯೆ ಜನರು ರಸ್ತೆ ಬದಿಗಳಲ್ಲಿ ನಿಂತು ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News