ನಾನು ಮುಂಬೈಗೆ ಹೋಗಿರಲಿಲ್ಲ: ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

Update: 2019-02-16 14:27 GMT

ಬೆಂಗಳೂರು, ಫೆ.16: ಆಡಳಿತ ಪಕ್ಷಗಳಲ್ಲಿ ಇದ್ದಂತಹ ಎಲ್ಲ ಗೊಂದಲಗಳು ಬಗೆಹರಿದಿರಬಹುದು. ಈಗಾಗಲೇ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ತಣ್ಣಗಾಗಿದ್ದಾರೆ. ಆಪರೇಷನ್ ಕಮಲ ಹಿನ್ನೆಲೆಯಲ್ಲಿ ನಾನು ಮುಂಬೈಗೆ ಹೋಗಿದ್ದೆ ಅನ್ನೋದು ಸುಳ್ಳು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಂಬೈಗೆ ಹೋಗಿದ್ದೆ ಅನ್ನೋದು ಸುಳ್ಳು. ಬೆಂಗಳೂರಿಗೆ ಆಗಾಗ್ಗೆ ಬಂದು ಹೋಗುತ್ತಿದ್ದೆ. ದಿನ ಬೆಳಗಾದರೆ ಆ ಶಾಸಕರು ಅಲ್ಲಿದ್ದಾರಂತೆ, ಈ ಶಾಸಕರು ಇಲ್ಲಿದ್ದಾರಂತೆ ಅನ್ನೋದನ್ನೆ ಕೇಳುತ್ತಿದ್ದೇವೆ ಎಂದರು.

ಮಾಧ್ಯಮಗಳಲ್ಲಿ ಬರುವ ಇಂತಹ ಸುದ್ದಿಗಳನ್ನು ನೋಡಿ ಜನರು ಬೇಸತ್ತು ಹೋಗಿದ್ದಾರೆ. ಆದುದರಿಂದ, ಈ ವಿಚಾರವನ್ನು ಇಲ್ಲಿಗೆ ಬಿಟ್ಟು, ಮುಂಬರುವ ಲೋಕಸಭಾ ಚುನಾವಣೆ ಕುರಿತು ಗಮನ ಹರಿಸುವುದು ಉತ್ತಮ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ವಿಧಾನಸಭೆಯಲ್ಲಿ ಅತೀ ಹೆಚ್ಚು ಶಾಸಕರನ್ನು ಹೊಂದಿರುವ ನಮ್ಮ ಪಕ್ಷಕ್ಕೆ ಸರಕಾರ ರಚನೆ ಮಾಡಬೇಕೆಂಬ ಉತ್ಸಾಹ ಇದ್ದೇ ಇರುತ್ತದೆ. ಮತದಾರರು ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಇನ್ನು 10 ಸ್ಥಾನ ಹೆಚ್ಚು ಕೊಟ್ಟಿದ್ದರೆ ಎಲ್ಲ ಸರಿಯಾಗಿರುತ್ತಿತ್ತು. ಆದರೆ, ಈಗ ನಾವು ಏನು ಮಾಡಲು ಆಗುತ್ತದೆ ಹೇಳಿ ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಭೇಟಿ ಮಾಡಿ ಒಂದೂವರೆ ತಿಂಗಳಾಗಿತ್ತು. ಆದುದರಿಂದ, ಇವತ್ತು ಭೇಟಿ ಮಾಡಿ ಮಾತನಾಡಿಸಿದ್ದೇನೆಯೆ ಹೊರತು, ರಾಜಕೀಯವಾಗಿ ಯಾವುದೇ ಚರ್ಚೆಗಳನ್ನು ಮಾಡಿಲ್ಲ ಎಂದರು.

ರಮೇಶ್ ಜಾರಕಿಹೊಳಿ ನನ್ನ ಹಿರಿಯ ಸಹೋದರ. ಕುಟುಂಬದ ವಿಚಾರ ಬಂದಾಗ ಕೆಲವು ಮಾತುಕತೆಗಳು ನಮ್ಮ ನಡುವೆ ನಡೆಯುತ್ತದೆ. ಆದರೆ, ಅವರ ಪಕ್ಷದ ವಿಚಾರದ ಕುರಿತು ನಾನು ತಲೆ ಹಾಕುವುದಿಲ್ಲ. ಇನ್ನು ಆಪರೇಷನ್ ಕಮಲಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಪ್ರಕರಣ ಈಗ ತನಿಖೆಯ ಹಂತದಲ್ಲಿದ್ದು, ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News