‘ಬಯೋಮೆಟ್ರಿಕ್ ಪದ್ಧತಿ’ ರದ್ದುಗೊಳಿಸಲು ಚಿಂತನೆ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-02-16 14:45 GMT

ಬೆಂಗಳೂರು, ಫೆ.16: ಪಡಿತರ ಆಹಾರವನ್ನು ‘ಬಯೋಮೆಟ್ರಿಕ್ ಪದ್ಧತಿ ಮೂಲಕ ವಿತರಿಸುವ ವ್ಯವಸ್ಥೆ ರದ್ದುಗೊಳಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಬಂಡೆಪ್ಪಕಾಶೆಂಪೂರ್ ಇಂದಿಲ್ಲಿ ಹೇಳಿದರು.

ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಏರ್ಪಡಿಸಿದ್ದ, ಸರಕಾರಕ್ಕೆ ಕೃತಜ್ಞತಾ ಸಮರ್ಪಣೆ ಹಾಗೂ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಬಯೋಮೆಟ್ರಿಕ್ ಅಳವಡಿಕೆಯಿಂದ ಕೂಲಿಕಾರ್ಮಿಕರು ದಿನದ ಕೆಲಸ ಬಿಟ್ಟು ಸಾಲುಗಟ್ಟಿ ನಿಲ್ಲುವಂತಾಗಿದೆ. ಕೆಲ ಜನರು ನಿಗದಿತ ಸಮಯಕ್ಕೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಯೋಮೆಟ್ರಿಕ್ ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಬಯೋಮೆಟ್ರಿಕ್ ಅಳವಡಿಕೆಯಿಂದ ಪ್ರತಿ ತಿಂಗಳು 5.60 ಕೋಟಿ ರೂ. ಪಡಿತರ ಆಹಾರ ಉಳಿಯುತ್ತಿದೆ. ಉಳಿತಾಯವಾಗುವ ಪಡಿತರಿಂದ ಸರಕಾರಕ್ಕೆ ಬಹು ಮೊತ್ತದ ಲಾಭ ಆಗುತ್ತಿಲ್ಲ. ಆದರೆ, ಸೂಕ್ತ ಸಮಯಕ್ಕೆ ಬಯೋಮೆಟ್ರಿಕ್ ನೀಡಲು ಒದಗಿಸದಿರುವುದರಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಅಧ್ಯಯನದ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಪಡಿತರ ವಿತರಕರ ಸಮಸ್ಯೆಗಳನ್ನು ಸರಕಾರ ಅರಿತುಕೊಳ್ಳಬೇಕು. ಪಡಿತರ ವಿತರಣೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸರಕಾರ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಡಾ.ಟಿ.ಕೃಷ್ಣಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲಕರು ಅಕಾಲಿಕವಾಗಿ ಮೃತಪಟ್ಟರೆ ಅವರ ಹೆಸರಿನಲ್ಲಿರುವ ಅಂಗಡಿ ಅನುಮತಿಯನ್ನು ಕುಟುಂಬಸ್ಥರಿಗೆ ನೀಡಬೇಕು. ಆಹಾರ ಸಾಗಾಣಿಕೆ ಸಾರಿಗೆ ಹಾಗೂ ಪೂರೈಕೆಯ ವೆಚ್ಚ ದುಬಾರಿಯಾಗುತ್ತಿದೆ. ಸರಕಾರ ಪ್ರಸ್ತುತ ನೀಡುತ್ತಿರುವ ಕಮಿಷನ್ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆಹಾರ ಪೂರೈಕೆ ಇಲಾಖೆಯ ಆಯುಕ್ತ ಟಿ.ಎಚ್.ಎಂ.ಕುಮಾರ್, ಪಡಿತರ ವಿತರಕರ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಬಿಸೆಂಬರ್ ಬಸು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್ ಸೇರಿದಂತೆ ಪ್ರಮುಖರಿದ್ದರು.

ಸಿಎಂ ಗಮನಕ್ಕೆ ಕಮಿಷನ್

ಸರಕಾರ ಪಡಿತರ ಆಹಾರಕ್ಕೆ ಪ್ರತಿ ಕ್ವಿಂಟಾಲ್‌ಗೆ ವಿತರಿಸುತ್ತಿರುವ ಕಮಿಷನ್ ಹೆಚ್ಚಿಸುವ ಬಗ್ಗೆ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News