ಎಲ್ಲರಿಗೂ ಸೇರಿದ ಸಮಾಜ ಸುಧಾರಕ ಸೇವಾಲಾಲ್: ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್

Update: 2019-02-16 15:07 GMT

ಬೆಂಗಳೂರು, ಫೆ.16: ಭವಿಷ್ಯದಲ್ಲಿ ಒಂದು ರೂಪಾಯಿಗೆ ಒಂದು ಬಟ್ಟಲು ನೀರು ಮಾರಾಟವಾಗುತ್ತದೆ ಎಂಬ ಮಾತನ್ನು 250 ವರ್ಷಗಳ ಹಿಂದೆಯೇ ಸಂತ ಸೇವಾಲಾಲ್ ನುಡಿದಿದ್ದರು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕಾವೇರಿ ಭವನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಜಲಮಂಡಳಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ‘ಸಂತ ಸೇವಾಲಾಲ್ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಲಮಂಡಳಿಯ ನೌಕರರೆಲ್ಲರೂ ಜನರಿಗೆ ನೀರು ಸರಬರಾಜು ಮಾಡುವ ಕಾರ್ಯವನ್ನು ಸೇವಾ ಮನೋಭಾವದಿಂದ ನಿರ್ವಹಿಸಬೇಕು. ಅಲ್ಲದೆ, ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ನೀರಿನ ಅಭಾವ ಸೃಷ್ಟಿಯಾಗದಂತೆ ಮುಂಜಾಗ್ರತೆ ಕ್ರಮವಹಿಸೋಣ ಎಂದು ಸಲಹೆ ಮಾಡಿದರು.

ಸೇವಾಲಾಲ್ ಸಮಾಜ ಸುಧಾರಕರಾಗಿದ್ದು, ಕೇವಲ ಒಂದು ಸಮಾಜಕ್ಕೆ ಸೇರದೆ, ಎಲ್ಲ ಸಮುದಾಯದವರಿಗೂ ಸಮಾಜ ಸುಧಾರಣೆಯ ರೀತಿ ನೀತಿಗಳನ್ನು ವಿವರಿಸುತ್ತಿದ್ದರು ಹಾಗೂ ನಾವು ಈ ಸಮುದಾಯದ ಜನರನ್ನು ಗೌರವಿಸಬೇಕು ಹಾಗೂ ಸೇವಾಲಾಲ್‌ರ ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಡಾ.ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಸೇವಾಲಾಲ್‌ರು ಬದುಕಿನುದ್ದಕ್ಕೂ ಸಮಾಜ ಸುಧಾರಣೆಗಾಗಿ ಶ್ರಮಿಸಿ, ಬಂಜಾರ ಸಮುದಾಯದ ಜನರಿಗೆ ಜೀವನದ ಹಾದಿಯನ್ನು ತೋರಿಸಿ ಕೊಟ್ಟರು. ಅಲ್ಲದೆ, ಶಿಕ್ಷಣ ಕಲಿಯಿರಿ. ಕಲಿತು ಕಲಿಸಿರಿ, ಕಲಿತವನು ಸರ್ವರನ್ನೂ ಒಗ್ಗೂಡಿಸಿ ಮುಂದೆ ಸಾಗುತ್ತಾನೆ ಎಂಬ ಸೇವಾಲಾಲ್‌ರ ಮಾತನ್ನು ಪಾಲಿಸಿ ಜಾರಿಗೆ ತರಬೇಕಾಗಿದೆ ಎಂದು ಬಂಜಾರ ಸಮುದಾಯ ಮೂಲ, ಆಚಾರ, ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸೇವಾಲಾಲ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಡಾ.ಎ.ಆರ್.ಗೋವಿಂದಸ್ವಾಮಿ ಬರೆದಿರುವ ಸಂತ ಸೇವಾಲಾಲ್‌ರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News