ಕೇಂದ್ರ ಸರಕಾರದಿಂದ ಕಾನೂನುಗಳ ದುರ್ಬಳಕೆ: ವಕೀಲ ಸುರೇಶ್

Update: 2019-02-16 16:22 GMT

ಬೆಂಗಳೂರು, ಫೆ.16: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಕಾಯ್ದೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಡಾ.ವಿ.ವಕೀಲ ಸುರೇಶ್ ಹೇಳಿದ್ದಾರೆ. 

ಶನಿವಾರ ನಗರದ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಪ್ರಜಾತಾಂತ್ರಿಕ ಜನರ ವೇದಿಕೆ ವತಿಯಿಂದ ‘ಜನ ವಿರೋಧಿ ಕರಾಳ ಶಾಸನಗಳ ಇತಿಹಾಸ ಮತ್ತು ಬೆಳವಣಿಗೆ’ ಕುರಿತ ಪಕ್ಷಿನೋಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೋಟಾ(ಪಿಒಟಿಎ) ಹಾಗೂ ಟಾಡಾ(ಟಿಎಡಿಎ) ಕಾಯ್ದೆಗಳಲ್ಲಿನ ಅಂಶಗಳನ್ನು ಸೇರಿಸಿ ಹಿಂದಿನ ಯುಪಿಎ ಸರಕಾರ ಜಾರಿಗೆ ತಂದಿರುವ ಯುಎಪಿಎ ಕಾಯ್ದೆಯನ್ನು ಇಂದಿನ ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಭೀಮಾಕೋರೆಗಾಂವ್ ಹಿಂಸಾಚಾರದ ಪ್ರಕರಣದಲ್ಲಿ ಭಾಗಿಯಾದ ನಿಜವಾದ ಆರೋಪಿಗಳನ್ನು ಬಂಧಿಸದೆ, ಊಹೆಯ ಆಧಾರದಲ್ಲಿ ಸಾಕ್ಷಿಗಳಿಲ್ಲದೆ ಸುಧಾ ಭಾರದ್ವಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ತಿಳಿಸಿದರು.

ದೇಶದಲ್ಲಿ ವ್ಯವಸ್ಥೆಯ ವಿರುದ್ಧ ಮಾತನಾಡುವ, ಪ್ರಶ್ನಿಸುವ ವಿಚಾರವಾದಿಗಳ ಧ್ವನಿಯನ್ನು ಅಡಗಿಸುವ ವ್ಯವಸ್ಥಿತವಾದ ಪಿತೂರಿ ಮಾಡಲಾಗುತ್ತಿದೆ. ಅದಕ್ಕಾಗಿ ಇಲ್ಲಿನ ಕಾಯ್ದೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕ್ಷುಲ್ಲಕ ವಿಚಾರಗಳಿಗೆ ಈ ಕಾಯ್ದೆ ಬಳಕೆ ಮಾಡುತ್ತಿದ್ದಾರೆ ಎಂದ ಅವರು, ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಂದಲೂ ನ್ಯಾಯ ಸಿಗುವ ಯಾವುದೇ ಭರವಸೆಯಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ವಕೀಲ ಬಾಲನ್ ಮಾತನಾಡಿ, ಭಾರತದಲ್ಲಿ ಬ್ರಿಟಿಷರು ಆಳ್ವಿಕೆ ಮಾಡುವ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಹಾಗೂ ದೇಶವನ್ನು ದೋಚಲು ಕೆಲ ಕಾನೂನುಗಳನ್ನು ಮಾಡಿದ್ದರು. ಸ್ವಾತಂತ್ರದ ನಂತರ ಸ್ವದೇಶಿಯರು ಅದೇ ಕಾನೂನುಗಳನ್ನು ಲೂಟಿ ಮಾಡಲು ಬಳಸಿಕೊಂಡರು. ಇಂದಿಗೂ ಅವು ಮುಂದುವರಿದಿವೆ ಎಂದು ಹೇಳಿದರು.

ದೇಶದಲ್ಲಿ ಜಾಗತೀಕರಣವನ್ನು ಜಾರಿ ಮಾಡಲು ಹಾಗೂ ಜಾಗತೀಕರಣದ ನೀತಿಗಳನ್ನು ವಿರೋಧಿಸುವವರನ್ನು ತಡೆಯಲು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರು. ನವ ಉದಾರವಾದಿ ನೀತಿಗಳನ್ನು ಜಾರಿ ಮಾಡುವ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರಕಾರವೂ ಜನರನ್ನು ನಿಯಂತ್ರಿಸಲು ಹಲವು ಕಾನೂನುಗಳನ್ನು ಜಾರಿ ಮಾಡಿದ್ದರು. ಇಂದು ಅಧಿಕಾರದಲ್ಲಿರುವ ಸರಕಾರವೂ ಅದನ್ನೇ ಮಾಡುತ್ತಿದೆ ಎಂದರು.

ವೇದಿಕೆಯ ಡಾ.ಶ್ರೀಧರ್ ಮಾತನಾಡಿ, ಸಾಮಾಜಿಕ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಎಡಪಂಥೀಯ ಹಾಗೂ ಅಂಬೇಡ್ಕರ್‌ವಾದ ಎರಡನ್ನೂ ಸಮೀಕರಿಸಿ, ವಿಶ್ಲೇಷಿಸುತ್ತಾ ಇಂದಿನ ಸ್ಥಿತಿಗೆ ಅನುಗುಣವಾಗಿ ಬಳಸಬೇಕು ಎಂದು ತಿಳಿಸುವ ಚಿಂತಕರಾಗಿದ್ದಾರೆ. ಮಾರ್ಕ್ಸ್ ಮೂಲಕ ಅಂಬೇಡ್ಕರ್, ಅಂಬೇಡ್ಕರ್ ಮೂಲಕ ಮಾರ್ಕ್ಸ್‌ನನ್ನು ವಿಶ್ಲೇಷಿಸಿದ್ದಾರೆ. ಆದರೆ, ಇಂದಿನ ಸರಕಾರ ಅವರನ್ನು ಬಂಧಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿರುವುದು ಶೋಚನೀಯ ಎಂದು ಹೇಳಿದರು.

ಇಂದಿನ ಬಂಡವಾಳಶಾಹಿ ಯುಗದಲ್ಲಿ ಮುಖವಾಡ ತೊಟ್ಟ ಹಿಂದೂ ಫ್ಯಾಶಿಸ್ಟ್‌ಗಳು ಹಾಗೂ ನವ ಉದಾರವಾದಿಗಳು ನಮ್ಮ ನಿಜವಾದ ಶತ್ರುಗಳಾಗಿದ್ದಾರೆ. ಅದನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ತೇಲ್ತುಂಬ್ಡೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News