ಯುವಜನ ಆಯೋಗ ರಚನೆಗಾಗಿ ಫೆ.17ರಿಂದ ಯುವಜನ ಹಕ್ಕುಗಳ ಮೇಳ

Update: 2019-02-16 16:31 GMT

ಬೆಂಗಳೂರು, ಫೆ.16: ಯುವ ಮುನ್ನಡೆ ವತಿಯಿಂದ ರಾಜ್ಯ ಯುವಜನ ಆಯೋಗ ರಚಿಸುವಂತೆ ಆಗ್ರಹಿಸಿ ಫೆ.17ರಿಂದ ಎರಡು ದಿನಗಳವರೆಗೆ ಜೆ.ಸಿ.ರಸ್ತೆಯ ಪುಟ್ಟಣ್ಣ ಶೆಟ್ಟಿ ಪುರಭವನದಲ್ಲಿ ಯುವಜನ ಹಕ್ಕುಗಳ ಮೇಳವನ್ನು ಆಯೋಜಿಸಲಾಗಿದೆ ಎಂದು ಮುನ್ನಡೆಯ ಸಂಚಾಲಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಒಂದು ತಿಂಗಳಿನಿಂದ ನಡೆಯುತ್ತಿರುವ ಯುವಜನ ಆಯೋಗಕ್ಕಾಗಿ ಯುವಾಂದೋಲನದ ಮೂಲಕ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳಿಂದ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ಆಯೋಗ ರಚನೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಯುವಜನ ಸಬಲೀಕರಣ ಇಲಾಖೆಯೊಂದಿಗೆ ಸಂವಹನ ನಡೆಯುತ್ತಿದೆ ಎಂದು ಹೇಳಿದರು.

ಯುವಜನರ ದೈಹಿಕ ಮಾನಸಿಕ ಬೆಳೆವಣಿಗೆಯ ಹಂತದಲ್ಲಾಗುವ ಆರೋಗ್ಯದ ಸವಾಲಿನೊಂದಿಗೆ ಶಿಕ್ಷಣ, ಉದ್ಯೋಗ, ಪ್ರೀತಿ, ಗೆಳೆತನ, ಮದುವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿಷಯಗಳಲ್ಲಿ ಯುವಜನರ ಒಳಗೆ ಗೊಂದಲ, ಬಿಕ್ಕಟ್ಟುಗಳಿವೆ. ಹೊರಗಿನಿಂದಲೂ ಒತ್ತಡಗಳಿವೆ. ತಂದೆ- ತಾಯಿಯರ ಪ್ರೀತಿಯ ಜೊತೆಗೆ ಯುವಜನರ ಸಾಮರ್ಥ್ಯಕ್ಕೆ ಮೀರಿದ ನಿರೀಕ್ಷೆಗಳು ಕುಟುಂಬದೊಳಗಿನ ದೌರ್ಜನ್ಯಗಳು, ಉದ್ಯೋಗದ ಸವಾಲುಗಳು ಯುವಜನತೆ ಬೆಳೆದು ಅರಳುವುದನ್ನು ಕುಂಠಿತಗೊಳಿಸುತ್ತದೆ ಎಂದರು.

ಫೆ.17ರಂದು ಶಾಂತಿನಗರದ ಜೋಸೆಫರ ಕಾಲೇಜಿನಲ್ಲಿ ನಡೆಯುವ ಬಲಾವಣೆಯ ಹಾದಿಯಲ್ಲಿರುವ ಯುವ ಮುಂದಾಳುಗಳೊಂದಿಗೆ ಸಂವಾದದಲ್ಲಿ ಚಲನಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್, ಸಾಮಾಜಿಕ ಹೋರಾಟಗಾರ್ತಿ ಶಾರದ ಮಾಳಗಿ ಹಾಗೂ ಕಲಾವಿದ ಬಾದಲ್ ನಂಜುಂಡಸ್ವಾಮಿ ಪಾಲ್ಗೊಳ್ಳಲಿದ್ದು, ಫೆ.18ರಂದು ಪುಟ್ಟಣ್ಣ ಶೆಟ್ಟಿ ಪುರಭವನದಲ್ಲಿ ನಡೆಯಲಿರುವ ಯುವಜನ ಯೋಗಕ್ಕಾಗಿ ಹಕ್ಕೊತ್ತಾಯ ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಂಖಾನ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ ಎಸ್.ಜಿ.ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಯುವಜನ ಆಯೋಗವೆಂದರೇನು?

ಯುವಜನ ಹಕ್ಕುಗಳ ರಕ್ಷಣೆಗಾಗಿ ಮತ್ತು ಯುವಜನರ ಶಿಕ್ಷಣ ಮತ್ತು ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಅದು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದೇ ಯುವಜನ ಆಯೋಗ. ಆಯೋಗದ ಗುರಿ ಉದ್ದೇಶಗಳು, ಸಂರಚನೆ ಮತ್ತು ಕಾರ್ಯಕಲಾಪಗಳು ಏನಿರುತ್ತದೆ ಎಂಬುದು ಇದಕ್ಕೆ ಸಂಬಂಧಿತ ಕಾನೂನಿನಲ್ಲಿ ವಿವರಿಸಲ್ಪಟ್ಟಿರುತ್ತದೆ.

ಹಕ್ಕೊತ್ತಾಯ

* ಉನ್ನತ ಶಿಕ್ಷಣದ ಹಕ್ಕು.

* ಘನತೆ ಮತ್ತು ಶೋಷಣೆ ರಹಿತ ಉದ್ಯೋಗದ ಹಕ್ಕು.

* ಆಪ್ತಸಮಾಲೋಚನೆ ಹಕ್ಕು.

* ಸರಕಾರ, ಸ್ಥಳಿಯಾಡಳಿತದಲ್ಲಿ ಭಾಗವಹಿಸುವ ಹಕ್ಕು.

* ಪೌಷ್ಠಿಕಾಂಶ ಆಹಾರ ಹಾಗೂ ಆರೋಗ್ಯದ ಹಕ್ಕು.

* ಲೈಂಗಿಕ ಶಿಕ್ಷಣ ಪಡೆಯುವ ಹಕ್ಕು.

* ಜೀವನ ಸಂಗಾತಿ ಆಯ್ಕೆಯ ಹಕ್ಕು.

* ವೇಷಭೂಷಣ ಹಾಕುವ ಹಕ್ಕು.

ಕೇರಳ ರಾಜ್ಯದಲ್ಲಿ ಈಗಾಗಲೇ ಸ್ಥಾಪನೆ ಮಾಡಿರುವಂತೆ ರಾಜ್ಯದಲ್ಲೂ ಸೂಕ್ತ ಕಾಯಿದೆಯನ್ನು ರೂಪಿಸಿ ಯುವಜನ ಆಯೋಗವನ್ನು ಸ್ಥಾಪಿಸಿ.

-ಯುವಜನ ಮುನ್ನಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News