ಶಿವರಾಮ ಕಾರಂತ ಬಡಾವಣೆಯಿಂದ ರೈತರಿಗೆ ಅನ್ಯಾಯ: ವೀರಪ್ಪ ಮೊಯ್ಲಿ

Update: 2019-02-16 16:34 GMT

ಬೆಂಗಳೂರು, ಫೆ.16: ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡ ಶಿವರಾಮಕಾರಂತ ಬಡಾವಣೆ ನಿರ್ಮಾಣದಿಂದ ಅಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಬೇಕಿದೆ ಎಂದು ಹಿರಿಯ ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಶನಿವಾರ ಯಲಹಂಕ ಕ್ಷೇತ್ರದ ಸೊಣ್ಣೇನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಚೊಕ್ಕನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬುಡುಮನಹಳ್ಳಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಸೇರಿದಂತೆ ಸುರಧೇನುಪುರ, ಅರಕೆರೆ ಕಾಲನಿ, ಶಾನುಭೋಗನಹಳ್ಳಿ ಚೆನ್ನಸಂದ್ರ ಗ್ರಾಮಗಳಲ್ಲಿ ಸುಮಾರು 5 ಕೋಟಿ ರೂ.ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಈ ಬಡಾವಣೆ ನಿರ್ಮಾಣದಿಂದ ಅಲ್ಲಿ ಜಮೀನು ಹೊಂದಿರುವ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ, ರೈತರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಆ ಸಂತ್ರಸ್ತ ರೈತರ ಪರ ನಾನಿದ್ದೇನೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೊಣ್ಣೇನಹಳ್ಳಿ ಜಿ.ಪಂ.ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಕಾಂಗ್ರೆಸ್ ಯಲಹಂಕ ಕ್ಷೇತ್ರ ಅಧ್ಯಕ್ಷ ಎಂ.ಎನ್.ಗೋಪಾಲಕೃಷ್ಣ, ಬೆಂ.ಉ.ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಭಾಷಾ, ತಾ.ಪಂ.ಸದಸ್ಯ ಆರ್.ನಾರಾಯಣಪ್ಪ, ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ವಿಶ್ವನಾಥ್, ಗ್ರಾ.ಪಂ. ಸದಸ್ಯ ಮಂಜುನಾಥ್, ಬುಡುಮನಹಳ್ಳಿ ಲೋಕೇಶ್, ರಾಜಾನುಕುಂಟೆ ನರಸಿಂಹ, ಸುರಧೇನುಪುರ ವಿಶ್ವನಾಥ್, ಮಾವಳ್ಳಿಪುರ ಮುನಿರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಯರಾಮಯ್ಯ ಸೇರಿ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News