ಶಿಕ್ಷಕರಿಗೆ ಕಾರ್ಯಾಗಾರಗಳು

Update: 2019-02-16 16:46 GMT

ಯೋಗೇಶ್ ಮಾಸ್ಟರ್

►ಕಲಿಕೆಯೆಂಬ ಪ್ರಕ್ರಿಯೆ

►ಅಧ್ಯಯನ ಮತ್ತು ಅರಿವು

ಶಿಕ್ಷಕರಿಗೇಕೆ ಕಾರ್ಯಾಗಾರ?

ಶಿಕ್ಷಕರಿಗೆ ಕಾಲಕಾಲಕ್ಕೆ ಕಾರ್ಯಾಗಾರಗಳನ್ನು ಮತ್ತು ಶಿಬಿರಗಳನ್ನು ಮಾಡುತ್ತಿರಲೇಬೇಕು. ಅನೇಕ ಕಾರಣಗಳು ಇದಕ್ಕಿವೆ.

1.ಶಿಕ್ಷಕರು ತಾವು ಮಕ್ಕಳಾಗಿದ್ದಾಗ ಕಲಿತದ್ದಕ್ಕಿಂತ ಈಗ ಅವರು ವಯಸ್ಕರಾಗಿ ವೃತ್ತಿ ಮಾಡುವ ಹೊತ್ತಿಗೆ ಜಾಗತಿಕವಾಗಿ ಮುಂದುವರಿದಿ ರುತ್ತದೆ ಮತ್ತು ಮಕ್ಕಳು ಕೂಡ ಭಿನ್ನವಾದ ಕಾಲಘಟ್ಟದಲ್ಲಿ ಭಿನ್ನವಾದ ಮಾನಸಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಹೊಂದಿರುತ್ತಾರೆ.

2.ಶಿಕ್ಷಣವು ಸದಾ ವಿಕಾಸಪರ ಮತ್ತು ಮುಂದುವರಿಯುವ ಪ್ರಕ್ರಿಯೆಯಲ್ಲಿಯೇ ನಿರತವಾಗಿರುವುದರಿಂದ ಮತ್ತು ಅದಕ್ಕೇ ಬದ್ಧವಾಗಿರುವುದರಿಂದ ಅದಕ್ಕೆ ಪೂರಕವಾಗಿ ಶಿಕ್ಷಕರೂ ಕೂಡಾ ಕಲಿಸುವ ಪ್ರಕ್ರಿಯೆ ಮತ್ತು ವಿಧಾನಗಳನ್ನು ಸೂಕ್ತವಾಗಿ ರೂಪಿಸಿಕೊಂಡಿರಬೇಕು. ತಮ್ಮ ಹಳೆಯ ಜಮಾನದ ಮತ್ತು ಪರಿಸ್ಥಿತಿಯ ನೆಲೆಗಟ್ಟಿನಲ್ಲಿಯೇ ಈಗಿನ ಮಕ್ಕಳಿಗೆ ಕಲಿಸುವ ಪದ್ಧತಿಯನ್ನಾಗಲಿ ಉಪಯೋಗಿಸಬಾರದು ಹಾಗೆಯೇ ತಾವು ಮಕ್ಕಳಿದ್ದಾಗ ಸಾಮಾನ್ಯ ಶಿಕ್ಷಕರು ಮಕ್ಕಳ ಬಗ್ಗೆ ಹೊಂದಿದ್ದಂತಹ ಧೋರಣೆಯನ್ನೇ ತಾವೂ ನಕಲು ಮಾಡುತ್ತಿರುವಂತೆ ವರ್ತಿಸಬಾರದು.

3.ವೈಜ್ಞಾನಿಕವಾಗಿ, ವೈಚಾರಿಕವಾಗಿ, ಚಾರಿತ್ರಿಕವಾಗಿ ಅನೇಕ ವಿಷಯಗಳು ಜಾಗತಿಕವಾಗಿ ಮಹತ್ತರವಾದ ಬದಲಾವಣೆಯನ್ನು ಹೊಂದಿರುತ್ತವೆ. ಪಠ್ಯದಿಂದ ಮಸ್ತಕಕ್ಕೆ ತುಂಬುವ ರೀತಿಯಲ್ಲಿ ಪಾಠ ಮಾಡಬಾರದಾಗಿರುವ ಕಾರಣದಿಂದ ಶಿಕ್ಷಕರು ಜಗತ್ತಿನ ಹೊಸ ಜಾಗತಿಕ ವಿದ್ಯಮಾನಕ್ಕೆ ತೆರೆದುಕೊಳ್ಳಲೇಬೇಕು.

4.ಸೂಕ್ಷ್ಮ ಮನಸ್ಸಿನ, ಸಂವೇದನಾಶೀಲವಾಗಿರುವಂತಹ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣಗಳು ಈಗಿವೆ. ಶಿಕ್ಷಣ ಸಂಸ್ಥೆಯೆಂಬುದು ಸಾಮಾಜಿಕ ಸಂಸ್ಥೆ. ಶಿಕ್ಷಕರು ಮಗುವಿಗೆ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ನೇರವಾಗಿ ಸಂಪರ್ಕವನ್ನು ಸಾಧಿಸುವವರಾದ್ದರಿಂದ ಎರಡೂ ರೀತಿಗಳಲ್ಲಿ ಸೂಕ್ಷ್ಮವಾಗಿ ಸಂವಹಿಸುವಂತಹ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ.

5.ಎಲ್ಲಾ ಪಠ್ಯವಿಷಯಗಳೂ ಕೂಡಾ ತೀವ್ರತರದಲ್ಲಿ ಮಾರ್ಪಾಡುಗಳನ್ನು ಮತ್ತು ವೈಜ್ಞಾನಿಕ ಬೆಳವಣಿಗೆಯನ್ನ್ನು ಕಂಡಿವೆ. ಅವುಗಳನ್ನು ಬೋಧಿಸುವ ವಿಧಾನವನ್ನೂ ಕೂಡ ಶಿಕ್ಷಕರು ಅರಿಯಬೇಕಾಗಿದೆ.

6.ಮಕ್ಕಳಿಗೆ ಬೋಧನೆ ಮಾತ್ರ ಮಾಡುತ್ತಾ, ಅವರನ್ನು ಉತ್ತಮ ಅಂಕಗಳೊಂದಿಗೆ ಯಶಸ್ವಿಯಾಗಿ ಶಾಲೆಯಿಂದ ಹೊರಗೆ ಹೋಗುವಂತೆ ಮಾಡುವುದಲ್ಲದೇ, ಸಮಾಜದಲ್ಲಿ ಸರಿಯಾದ ಪ್ರಜೆಯಾಗಿ, ಕುಟುಂಬಕ್ಕೆ ಸರಿಯಾದ ಸದಸ್ಯನಾಗಿ ಮಾಡುವಂತಹ ಹೊಣೆಗಾರಿಕೆ ಕೂಡಾ ಶಿಕ್ಷಕರಿಗೆ ಇರುತ್ತದೆ. ವೌಲ್ಯಾಧಾರಿತ ಶಿಕ್ಷಣವೆಂದರೆ ಏನೆಂದು ಅರ್ಥವಾಗಿರುವ ಶಿಕ್ಷಕರಿಗೆ ಮಾತ್ರ ತಮ್ಮ ಕೆಲಸದ ಸೂಕ್ಷ್ಮತೆ ಮತ್ತು ಸಂವೇದನೆ ಅರ್ಥವಾಗುವುದು. ಹಾಗಾಗಿ, ಬೋಧನೆಯ ಜೊತೆ ಜೊತೆಗೆ ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುವಂತೆ, ಬೌದ್ಧಿಕವಾಗಿ ಪ್ರಬುದ್ಧರಾಗುವಂತೆ ನೋಡಿಕೊಳ್ಳುವ ಬಾದ್ಯತೆಯೂ ಇರುವುದರಿಂದ ಅವರು ಸಮಾಲೋಚನೆ ಮಾಡುವವರಾಗಿರಬೇಕು. ಆ ಸಮಾಲೋಚನೆಯೂ ಕೂಡಾ ಬೋಧನೆಯ ಅಥವಾ ಉಪದೇಶದ ರೀತಿಯಲ್ಲಿರದೇ ಜೀವಂತ ಮಾದರಿಯ ರೂಪದಲ್ಲಿರಬೇಕು. ಇದಕ್ಕೆ ಬೇಕಾಗಿರುವುದು ವಿಶೇಷವಾದ ತರಬೇತಿಯೋ ಅಥವಾ ತೀವ್ರತರವಾದ ಶಾಸ್ತ್ರೀಯ ಶಿಕ್ಷಣವೋ ಅಲ್ಲ. ಬದಲಿಗೆ ಸಾಮಾನ್ಯ ಪ್ರಜ್ಞೆ ಮತ್ತು ಸೂಕ್ಷ್ಮಗ್ರಹಿಕೆಯ ರೂಢಿ.

7. ಶಿಕ್ಷಕರು ಪಾಠ ಆಟಗಳೊಂದಿಗೆ ಮಕ್ಕಳ ವರ್ತನೆಗಳನ್ನು ರೂಪಿಸುವವರೂ ಆಗಿರಬೇಕು. ಹಾಗೆ ವರ್ತನೆಗಳನ್ನು ರೂಪಿಸುವಂತಹ ಮಹತ್ಕಾರ್ಯದಲ್ಲಿ ತಾವು ತಮ್ಮ ವರ್ತನೆಗಳ ಪ್ರದರ್ಶನದಲ್ಲಿ ಬಹಳ ಎಚ್ಚರಿಕೆಯನ್ನು ಹೊಂದಿರಬೇಕು. ಮಕ್ಕಳು ತಮಗೆ ಯಾವ ಶಿಕ್ಷಕರು ಯಾವ ಪಾಠವನ್ನು ಎಷ್ಟು ಚೆನ್ನಾಗಿ ಮಾಡುತ್ತಾರೆ ಎಂಬುದಕ್ಕಿಂತ, ಯಾವ ಶಿಕ್ಷಕರು ತಮ್ಮ ಜೊತೆ ಯಾವ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನೇ ಗ್ರಹಿಸುವುದು. ಹಾಗಾಗಿ ವರ್ತನೆಯ ಮನೋವಿಜ್ಞಾನದ ಪ್ರಾರಂಭಿಕ ಪಾಠಗಳು ಶಿಕ್ಷಕರಿಗೆ ಖಂಡಿತ ಅತ್ಯಗತ್ಯ. ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದಿರುವಂತಹ ಬೋಧನೆಗಳು ಯಾವುವೂ ಈಗ ಕೆಲಸಕ್ಕೆ ಬರುವುದಿಲ್ಲ. ಆದರೆ, ವರ್ತನೆಯ ಉದಾಹರಣೆಗಳು ಮಾದರಿಯಾಗಿ ನಿಲ್ಲಬಲ್ಲವು. ಪ್ರೇರಣೆಯಾಗುವವು.

8.ಎಲ್ಲಾ ತರಗತಿಗಳಲ್ಲಿ ಕಲಿಕೆಯಲ್ಲಿ ನ್ಯೂನತೆ ಇರುವಂತಹ, ನಿರ್ಗಲಿಕೆ (ಡಿಸ್ಲೆಕ್ಸಿಯಾ) ಇರುವಂತಹ ಮಕ್ಕಳಿರುತ್ತಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ನಾನಾ ಬಗೆಯ ಸಮಸ್ಯೆಗಳು ಅವರಿಗೇ ಗೊತ್ತಿಲ್ಲದಂತೆ ಇರುತ್ತವೆ. ಅಂತವನ್ನು ತಿಳಿದು ಅದಕ್ಕೆ ತಕ್ಕನಾಗಿ ಬೋಧನಾಕ್ರಮಗಳನ್ನು ರೂಪಿಸಿಕೊಳ್ಳುವ ಅಗತ್ಯ ಶಿಕ್ಷಕರಿಗಿವೆ.

9.ನಿಧಾನವಾಗಿ ಕಲಿಯುವವರು, ಜಾಣರು, ಏನೂ ಕಲಿಯದವರು, ಕಲಿಸುವ ಮುನ್ನವೇ ಕಲಿತು ಬರುವವರು; ಹೀಗೆ ಎಲ್ಲಾ ಬಗೆಯ ಗುಂಪು ಈ ತರಗತಿಗಳಾಗಿ ರಬಹುದು. ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸಂಬಾಳಿಸಿಕೊಂಡು, ಕಲಿಕೆ ಎಂಬುದು ಎಲ್ಲರಿಗೂ ದಕ್ಕುವ ಹಾಗೆ ನೋಡಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರಿಗಿವೆ.

10.ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ ಇತ್ಯಾದಿ ವಿಶೇಷ ಶಿಸ್ತಿನ ಗುಂಪುಗಳ ಉಸ್ತುವಾರಿಗಳನ್ನೂ ಕೂಡಾ ಶಿಕ್ಷಕರಲ್ಲಿ ಕೆಲವರು ಹೊರಬೇಕಾಗುತ್ತದೆ.

11.ಕಲೆ, ಕ್ರೀಡೆ, ಸಾಹಿತ್ಯ, ವೈಜ್ಞಾನಿಕ ಚಟುವಟಿಕೆಗಳು; ಹೀಗೆ ಹತ್ತು ಹಲವು ಕೋ-ಕರಿಕ್ಯುಲರ್ ಚಟುವಟಿಕೆಗಳು ಕೂಡಾ ಶಿಕ್ಷಕರ ಬಗಲಿಗಿರುವವೇ. ಹೀಗೆ ನಾನಾ ಹೊಣೆಗಾರಿಕೆಗಳು ಶಿಕ್ಷಕರ ಹೆಗಲೇರಿರುವುದರಿಂದ ಶಿಕ್ಷಕರಿಗೆ ವಿವಿಧ ವಿಷಯಗಳ ಕುರಿತಾಗಿ ಶಿಬಿರಗಳನ್ನು ಮತ್ತು ಕಾರ್ಯಾಗಾರಗಳನ್ನು ಮಾಡುತ್ತಿರಬೇಕು.

ಶಿಬಿರ -ಕಾರ್ಯಾಗಾರಗಳ ವಿಷಯಗಳೇನಿರಬೇಕು?

ಒಂದು ಶಾಲೆಗೆ ಹೊಸ ಕ್ರೀಡಾ ತರಬೇತಿದಾರ ಸೇರ್ಪಡೆಯಾಗಿದ್ದರು. ಮಾತಾಡುತ್ತಾ ಮಾತಾಡುತ್ತಾ ಕೇಳಿದೆ. ಮಕ್ಕಳಲ್ಲಿ ಶಿಸ್ತನ್ನು ರೂಢಿಸಲು ಏನು ಮಾಡುತ್ತೀರಿ?

ಬೆತ್ತ ತಗೊಂಡು ಸರಿಯಾಗಿ ಎರಡು ಬಾರಿಸಿದರೆ ದಾರಿಗೆ ಬರುತ್ತಾರೆ ಎಂದ ಪುಣ್ಯಾತ್ಮ. ನಾನು ಗಾಬರಿಗೊಂಡೆ. ಬೆತ್ತ ತಗೊಂಡು ಬಾರಿಸಿದರೆ ಮಕ್ಕಳು ಸರಿ ಹೋಗುತ್ತಾರಾ? ಹೌದು ಸರ್, ಬೆತ್ತ ನೋಡಿದ ತಕ್ಷಣ ಭಯ ಬರತ್ತೆ. ಹೇಳಿದ ಮಾತು ಕೇಳುತ್ತಾರೆ ಎಂದ, ಜೊತೆಗೆ ಮುಂದೆ ಮಾತು ಪೋಣಿಸಿ, ನಮ್ಮೂರಿನ ಕಡೆ ಅಪ್ಪ ಅಮ್ಮನೇ ಬಂದು ನಮ್ಮ ಮಕ್ಕಳಿಗೆ ಸರಿಯಾಗಿ ಬಾರಿಸಿ ಎಂದು ಹೇಳುತ್ತಾರೆ ಎಂದ. ಈ ಶಿಕ್ಷಕ ಯಾವುದೋ ಹತ್ತಾರು ದಶಕಗಳ ಹಿಂದಿನವನಲ್ಲ. ಕೇವಲ ಇಪ್ಪತ್ತರ ಪ್ರಾಯದ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಮ್ಮ ಸಮಾಜ ವೇಗವಾಗಿ ತೆರೆದುಕೊಳ್ಳುತ್ತಿರುವ ಕಾಲದವನೇ. ಶಿಸ್ತು ಭಯದಿಂದ ರೂಢಿಯಾಗಬೇಕೆಂದು ಭಾವಿಸಿರುವ ಶಿಕ್ಷಕರು ಪೋಷಕರು ತಮ್ಮ ಮಕ್ಕಳಿಗೆ ಎಂತಹ ಶಿಸ್ತನ್ನು ರೂಢಿಸುತ್ತಾರೆ ಎಂಬ ಅರಿವೇ ಅವರಿಗಿಲ್ಲ. ಮನುಷ್ಯ ವ್ಯಕ್ತಿಗತವಾಗಿ, ದೇಶ, ಭಾಷೆ, ಸಮಾಜ ಮತ್ತು ಇಡೀ ವಿಶ್ವವೇ ಹೊಸ ಹೊಸ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಿದೆ. ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿವೆ. ಆದರೆ ಕಲಿಕೆಯ ವಿಷಯದಲ್ಲಿ ಮಾತ್ರ ಬಹುಪಾಲು ಶಿಕ್ಷಕರು ಕೂಪಮಂಡೂಕವಾಗಿಯೇ ಉಳಿದಿದ್ದಾರೆ. ಹಾಗಾಗಿ ಶಿಕ್ಷಕರಿಗೆ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು? ಯಾವ ಬೋಧನಾಕ್ರಮಗಳನ್ನು ರೂಢಿಸಿಕೊಳ್ಳಬೇಕು? ಎಂತಹ ಮಾರ್ಪಾಟುಗಳನ್ನು ತಮ್ಮ ವರ್ತನೆಗಳಲ್ಲಿ, ಧೋರಣೆಗಳಲ್ಲಿ ತಂದುಕೊಳ್ಳಬೇಕು ಮತ್ತು ಆತ್ಮಪರೀಕ್ಷೆ ಮಾಡಿಕೊಳ್ಳಬೇಕು ಎಂಬ ಹಲವು ವಿಷಯಗಳಿವೆ. ಇವುಗಳೆಲ್ಲವೂ ಸಾಧಾರಣವಾಗಿ ಹಾಗೆಯೇ ದಕ್ಕಿಬಿಡುವುದೇನಲ್ಲ. ಇದಕ್ಕೆ ಸೂಕ್ತವಾದ ಅಧ್ಯಯನ, ಸಂಶೋಧನೆ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳವಣಿಗೆ ಎಲ್ಲವೂ ಬೇಕು. ಹಾಗಾಗಿಯೇ ಇವುಗಳನ್ನೂ ಸೇರಿದಂತೆ ಇನ್ನೂ ಹಲವು ವಿಷಯಗಳ ಕುರಿತಾಗಿ ಶಿಬಿರಗಳು ಮತ್ತು ಕಾರ್ಯಾಗಾರಗಳು ಶಿಕ್ಷಕರಿಗೆ ಬೇಕಾಗಿವೆ. ಅವೇನೆಂದು ಮುಂದೆ ನೋಡೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News