ಗಾಂಧಿಗೆ ಟಾಗೋರ್ ಬರೆದ ಪತ್ರಗಳು

Update: 2019-02-16 16:58 GMT

1915 ಮತ್ತು 1941ರ ಮಧ್ಯೆ ಭಾರತ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ, ಮಹಾತ್ಮಾ ಗಾಂಧಿ ಮತ್ತು (ಅಕ್ಟೋಬರ್2, 1869-ಜನವರಿ30,1948) ಭಾರತೀಯ ಕವಿ, ತತ್ವಜ್ಞಾನಿ ರಬೀಂದ್ರನಾಥ ಟಾಗೋರ್ (ಮೇ 7,1861-ಆಗಸ್ಟ್ 7,1941) ಅವರ ಮಧ್ಯೆ ಸತ್ಯ, ಸ್ವಾತಂತ್ರ, ಪ್ರಜಾಪ್ರಭುತ್ವ, ಧೈರ್ಯ, ಶಿಕ್ಷಣ ಮತ್ತು ಮಾನವತೆಯ ಭವಿಷ್ಯದ ಬಗ್ಗೆ ಚರ್ಚಿಸಿ ಪತ್ರ ವ್ಯವಹಾರ ನಡೆದಿತ್ತು.

ಮಹಾತ್ಮ ಮತ್ತು ಕವಿ: ಗಾಂಧಿ ಮತ್ತು ಟಾಗೋರ್ ಮಧ್ಯೆ ಪತ್ರಗಳು ಮತ್ತು ಚರ್ಚೆಗಳು ಪುಸ್ತಕದಲ್ಲಿರುವ ಪತ್ರವ್ಯವಹಾರಗಳ ಸಂಗ್ರಹ ಇತಿಹಾಸದ ಗಣ್ಯ ವ್ಯಕ್ತಿಗಳ ಮಧ್ಯೆ ನಡೆದ ಪತ್ರವ್ಯವಹಾರಗಳ ಸಂಗ್ರಹಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ.

ಈ ಪತ್ರಗಳು ಸ್ವಭಾವತಃ ವೈಯಕ್ತಿಕವಾಗಿದ್ದರೂ ಅವುಗಳಲ್ಲಿದ್ದ ವಿಷಯ ಸಾರ್ವಜನಿಕ ಕುರಿತಾಗಿದ್ದವು. ಟಾಗೋರ್ ಇಂಡಿಯನ್ ನ್ಯಾಶನಲಿಸ್ಟ್ ಇಂಟಲಿಜೆನ್ಸ್‌ನ ಫಾರಮ್‌ನಲ್ಲಿ ಆಧುನಿಕ ವಿಮರ್ಶೆ ಬರೆಯುತ್ತಿದ್ದರೆ ಗಾಂಧಿ ತಮ್ಮದೇ ಆದ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅವರ ಪರಸ್ಪರ ಗೌರವ ಮತ್ತು ಅಳೆದು ತೂಗಿ ನೀಡುವ ಸ್ಪಂದನೆ, ಇಂದಿನ ಕಾಲದಲ್ಲಿ ಬ್ಲಾಗ್‌ಗಳು ಮತ್ತು ಆನ್‌ಲೈನ್‌ನಂತಹ ಸಾರ್ವಜನಿಕ ವೇದಿಕೆಯಲ್ಲಿ ನಡೆಯುವ ಚರ್ಚೆಗಳಿಗಿಂತ ವಿಭಿನ್ನವಾಗಿತ್ತು.

ಅವಹೇಳನಕಾರಿ ಶಬ್ದಗಳೇ ತುಂಬಿ ಹೋಗಿರುವ ಇಂದಿನ ರಾಜಕೀಯ ಚರ್ಚೆಯ ದಿನಗಳಲ್ಲಿ, ಗೆಳೆಯರಾಗಿದ್ದೂ ಭೌತಿಕ ವಿರೋಧಾಭಾಸ ಹೊಂದಿರುವುದು ಹೇಗೆ, ಒಬ್ಬರ ಘನತೆ ಮತ್ತು ಗೌರವಕ್ಕೆ ಕುಂದುಂಟು ಮಾಡದೆ ನಮ್ಮ ನಿಲುವಲ್ಲೂ ದೃಢವಾಗಿರುವುದು ಹೇಗೆ ಮತ್ತು ತನ್ನ ಅಹಂ ಅನ್ನು ಬದಿಗೊತ್ತಿ ಸಾರ್ವಜನಿಕರ ಒಳಿತಿಗೆ ಶ್ರಮಿಸುವುದು ಹೇಗೆ ಎಂಬುದಕ್ಕೆ ಈ ಪತ್ರಗಳು ಉತ್ತಮ ಉದಾಹರಣೆಯಾಗಿವೆ.

ಗಾಂಧೀಜಿ ಓರ್ವ ನಾಯಕರೆಂದು ಟಾಗೋರ್ ಸಂಪೂರ್ಣ ಮನಸ್ಸಿನಿಂದ ಒಪ್ಪಿದ್ದರೂ ಅವರ ಕೆಲವೊಂದು ತಂತ್ರಗಳ ಬಗ್ಗೆ ಟಾಗೋರ್‌ಗೆ ವಿರೋಧವಿತ್ತು. ಮುಖ್ಯವಾಗಿ ಅಸಹಕಾರದ ಬಳಕೆ, ಇದರಿಂದ ಅಸಹಿಷ್ಣುತೆಯ ಬೀಜ ಬಿತ್ತಿದಂತಾಗುತ್ತದೆ ಎಂದು ಕವಿ ಭಾವಿಸಿದ್ದರು. ಎಪ್ರಿಲ್ 19, 1919ರಂದು ಟಾಗೋರ್ ಬರೆಯುತ್ತಾರೆ;

►ಪ್ರಿಯ ಮಹಾತ್ಮಾಜೀ,

ಅಧಿಕಾರವು ಎಲ್ಲ ರೂಪದಲ್ಲೂ ವಿವೇಚನಾರಹಿತವಾಗಿದೆ. ಅದು ಗಾಡಿಯನ್ನು ಕುರುಡಾಗಿ ಎಳೆಯುವ ಕುದುರೆಯಂತೆ. ಅದರ ನೈತಿಕತೆಯನ್ನು ಕೇವಲ ಕುದುರೆಯನ್ನು ಸವಾರಿ ಮಾಡುವ ವ್ಯಕ್ತಿ ಮಾತ್ರ ಪ್ರತಿನಿಧಿಸುತ್ತಾನೆ. ನಿಷ್ಕ್ರಿಯ ಪ್ರತಿರೋಧ ನೈತಿಕವಾಗಿರಬೇಕೆಂಬ ಅಗತ್ಯವೇನೂ ಇಲ್ಲ. ಅದನ್ನು ಸತ್ಯಕ್ಕೆ ವಿರುದ್ಧವಾಗಿಯೂ ಬಳಸಬಹುದು. ಎಲ್ಲ ಶಕ್ತಿಗಳಲ್ಲಿ ಅಡಕವಾಗಿರುವ ಅಪಾಯ ಅದು ಯಶಸ್ಸನ್ನು ಪಡೆಯುವಾಗ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತದೆ, ಆಗ ಅದು ದುರಾಸೆಯಾಗಿ ಬದಲಾಗುತ್ತದೆ.

ಕೆಟ್ಟದ್ದರ ವಿರುದ್ಧ ಒಳ್ಳೆಯದರ ಸಹಾಯದಿಂದ ಹೋರಾಟ ನಿಮ್ಮ ಬೋಧನೆಯಾಗಿದೆ ಎಂದು ನನಗೆ ತಿಳಿದಿದೆ. ಆದರೆ ಅಂತಹ ಹೋರಾಟ ಕುದುರೆಗಾಗಿ ನಡೆಯುವಂತಹದ್ದಾಗಿದ್ದು ಕ್ಷಣದ ಉದ್ವೇಗಕ್ಕೆ ಒಳಗಾದ ಆ ವ್ಯಕ್ತಿಗಾಗಿ ಅಲ್ಲ. ಒಂದು ಕಡೆಯ ಕ್ರೂರತೆ ಇನ್ನೊಂದು ಕಡೆಯಲ್ಲೂ ಕ್ರೂರತೆಯನ್ನೇ ಹುಟ್ಟುಹಾಕುತ್ತದೆ. ಅನ್ಯಾಯ ಹಿಂಸಾಚಾರಕ್ಕೆ ಎಡೆಮಾಡಿದರೆ ಅವಮಾನ ಪ್ರತೀಕಾರಕ್ಕೆ ಹವಣಿಸುತ್ತದೆ.

ದುರದೃಷ್ಟವಶಾತ್, ಅಂತಹ ಶಕ್ತಿ ಈಗಾಗಲೇ ಆರಂಭವಾಗಿದೆ ಮತ್ತು ಗೊಂದಲ ಅಥವಾ ಕ್ರೋಧದ ಮೂಲಕ ನಮ್ಮ ಅಧಿಕಾರಿವರ್ಗ ನಮಗೆ ಬೆರಳನ್ನು ತೋರಿಸಿದ್ದು ಅದರ ಪರಿಣಾಮವಾಗಿ ನಮ್ಮಲ್ಲಿ ಕೆಲವರು ಅಸಮಾಧಾನದ ರಹಸ್ಯ ದಾರಿಯಲ್ಲಿ ಮುನ್ನಡೆದರೆ ಇನ್ನು ಕೆಲವರು ಅವಮಾನಕ್ಕೊಳಗಾಗಲಿದ್ದಾರೆ.

ಈ ಸಂಕಷ್ಟದಲ್ಲಿ ಜನನಾಯಕರಾಗಿರುವ ನೀವು ಭಾರತ ಎಂಬ ಆದರ್ಶದ ಮೇಲೆ ನಂಬಿಕೆಯನ್ನು ಪುನರ್‌ಸ್ಥಾಪಿಸಲು ನಮ್ಮಾಂದಿಗೆ ನಿಂತಿದ್ದೀರಿ. ಭಾರತ ಎಂದರೆ ಅಡಗಿರುವ ಪ್ರತೀಕಾರದ ಪುಕ್ಕಲುತನದ ಮತ್ತು ಭಯಗ್ರಸ್ತರ ಶರಣಾಗತಿಯ ವಿರುದ್ಧದ ಆದರ್ಶ. ಬುದ್ಧ ಏನು ಹೇಳಿದ್ದನೋ ಅದನ್ನೇ ನೀವು ಹೇಳಿದ್ದೀರಿ ಮತ್ತು ಮಾಡಿದ್ದೀರಿ; ಕೋಪವನ್ನು ಶಾಂತಿಯ ಬಲದಿಂದ ಗೆಲ್ಲಿ ಮತ್ತು ಕ್ರೌರ್ಯವನ್ನು ಒಳ್ಳೆಯತನದಿಂದ.

ಈ ಒಳ್ಳೆಯತನದ ಶಕ್ತಿಯು ತನ್ನ ಸತ್ಯ ಮತ್ತು ಬಲವನ್ನು ತನ್ನ ನಿರ್ಭಯತೆಯಿಂದ ಸಾಬೀತುಪಡಿಸಬೇಕು. ನೈತಿಕ ಗೆಲುವು ಯಶಸ್ಸಿನಲ್ಲಿಲ್ಲ ಎನ್ನುವುದನ್ನು ನಾವು ಅರಿಯಬೇಕು ಮತ್ತು ವೈಫಲ್ಯ ಎನ್ನುವುದು ಅದನ್ನು ಅದರ ಘನತೆ ಮತ್ತು ಅರ್ಹತೆಯಿಂದ ವಂಚಿತಗೊಳಿಸುವುದಿಲ್ಲ. ಅಗಾಧ ಲೌಕಿಕ ಶಕ್ತಿಯ ಬೆಂಬಲವನ್ನು ಹೊಂದಿರುವ ತಪ್ಪಿನ ವಿರುದ್ಧ ನಿಲ್ಲುವುದೂ ಗೆಲುವೇ ಎಂದು ಆಧ್ಯಾತ್ಮಿಕ ಜೀವನದ ಬಗ್ಗೆ ನಂಬಿಕೆಯಿರುವವರು ತಿಳಿದಿದ್ದಾರೆ.

ಸ್ವಾತಂತ್ರದ ಉಡುಗೊರೆ ಜನರಿಗೆ ದಾನದ ಮೂಲಕ ಬರಲು ಸಾಧ್ಯವಿಲ್ಲ. ಅದನ್ನು ನಾವು ನಮ್ಮದಾಗಿಸಲು ಮೊದಲು ಗೆಲ್ಲಬೇಕು ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಮತ್ತು ನೀವು ಅಗತ್ಯವಿರುವ ಸಮಯದಲ್ಲೇ ನಿಮ್ಮ ತಾಯ್ನಾಡಿಗೆ ಮರಳಿದ್ದೀರಿ, ಆಕೆಗೆ ತನ್ನ ಯೋಜನೆಯ ನೆನಪು ಮುಟ್ಟಿಸಲು, ಗೆಲುವಿನ ನಿಜವಾದ ದಾರಿಯಲ್ಲಿ ಆಕೆಯನ್ನು ಕೊಂಡೊಯ್ಯಲು, ರಾಜನೈತಿಕ ಅಪ್ರಾಮಾಣಿಕತೆಯ ಖರೀದಿಸಿದ ರೆಕ್ಕೆಗಳ ಬಿಂಕವನ್ನು ಪ್ರದರ್ಶಿಸುವ ಮೂಲಕ ತನ್ನ ಉದ್ದೇಶ ನೆರವೇರಿತು ಎಂದು ಭಾವಿಸುವ ಪ್ರಸ್ತುತ ರಾಜಕೀಯ ದೌರ್ಬಲ್ಯವನ್ನು ಶುದ್ಧ್ದೀಕರಿಸಲು.

ನಿಮ್ಮ ನಡೆಯ ಹಾದಿಯನ್ನು ಅತಿಕ್ರಮಿಸುವ ನಮ್ಮ ಆಧ್ಯಾತ್ಮಿಕ ಸ್ವಾತಂತ್ರವನ್ನು ಯಾವುದೂ ಬಲಹೀನಗೊಳಿಸದಿರಲಿ, ಸತ್ಯಕ್ಕಾಗಿ ಹುತಾತ್ಮರಾಗುವುದು ಕೇವಲ ಮತಾಂಧತೆಯಾಗಿ ಕ್ಷೀಣಿಸದಿರಲಿ ಎಂದು ನಾನು ಸದಾ ಪ್ರಾರ್ಥಿಸುತ್ತೇನೆ.

ಪರಿಚಯಕ್ಕಾಗಿ ಈ ಕೆಲವು ಶಬ್ದಗಳ ನಂತರ ನಿಮ್ಮ ಆದರ್ಶ ಕಾರ್ಯಕ್ಕೆ ಓರ್ವ ಕವಿಯಾಗಿ ನನ್ನ ಕಾಣಿಕೆಯನ್ನು ನೀಡಲು ಅವಕಾಶ ಮಾಡಿಕೊಡಿ: ನೀವೇ ನಮಗೆ ಆಶ್ರಯ ಎಂಬ ವಿಶ್ವಾಸದಿಂದ ನಾನು ನನ್ನ ತಲೆ ಎತ್ತುತ್ತೇನೆ, ಈ ಬಗ್ಗೆ ಅಪನಂಬಿಕೆಯೇ ಭಯಕ್ಕೆ ಮೂಲ.

ಮನುಷ್ಯರ ಭಯ? ಆದರೆ ಈ ಜಗತ್ತಿನಲ್ಲಿ ಮಾನವ ಯಾರು, ರಾಜ ಯಾರು, ರಾಜರ ರಾಜ ಯಾರು, ಅವರ ಶತ್ರು ಯಾರು, ಎಲ್ಲ ಸಮಯದಲ್ಲೂ ಎಲ್ಲ ಸತ್ಯದಲ್ಲೂ ನನ್ನನ್ನು ಹಿಡಿದಿಟ್ಟವರು ಯಾರು?

ನನ್ನ ಸ್ವಾತಂತ್ರವನ್ನು ಕದಿಯುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗಿದೆ? ನಿಮ್ಮ ಕೈಗಳು ಅನಿಯಂತ್ರಿತ ಆತ್ಮಕ್ಕೆ ಬಿಡುಗಡೆ ನೀಡಲು ಬಂಧಿತ ಕತ್ತಲೆಕೋಣೆಯ ಗೋಡೆಗಳನ್ನು ದಾಟಿ ಬರಬಹುದೇ?

ಮತ್ತು ಭಯದಿಂದ ನಾನು ಈ ದೇಹಕ್ಕೆ ಅಂಟಿಕೊಳ್ಳಲೇ, ಆತನ ಬಂಜರು ಖಜಾನೆಯನ್ನು ಹಿಡಿದ ಜಿಪುಣನಂತೆ/ನನ್ನ ಈ ಆತ್ಮ ನಿಮ್ಮ ಕೊನೆಯಾಗದ ಜೀವನೋತ್ಸಾಹದ ಶಾಶ್ವತ ಕರೆಯಲ್ಲವೇ?

ನೋವು ಮತ್ತು ಸಾವು ಎಲ್ಲವೂ ಆ ಕ್ಷಣದ ನೆರಳುಗಳು. ನನ್ನ ಮತ್ತು ನಿಮ್ಮ ಸತ್ಯದ ನಡುವೆ ಓಲಾಡುತ್ತಿರುವ ಕರಾಳ ಶಕ್ತಿಗಳು ಸೂರ್ಯೋದಯದ ಮೊದಲ ಮಂಜು. ನೀವು ಮಾತ್ರ ಎಂದಿಗೂ ನನ್ನವರು ಮತ್ತು ನನ್ನ ಪುರುಷತ್ವವನ್ನು ವ್ಯಂಗ್ಯವಾಡುವ ಧೈರ್ಯಹೊಂದಿರುವ ಶಕ್ತಿಯ ಎಲ್ಲ ಅಹಂಗಿಂತಲೂ ದೊಡ್ಡದು.

ನನಗೆ ಪ್ರೀತಿಯ ಸರ್ವೋಚ್ಚ ಧೈರ್ಯವನ್ನು ನೀಡಿ, ಇದುವೇ ನನ್ನ ಪ್ರಾರ್ಥನೆ; ಮಾತನಾಡಲು ಧೈರ್ಯ, ಮಾಡಲು, ನಿಮ್ಮ ಬಯಕೆಯಂತೆ ಕಷ್ಟಪಡಲು, ಎಲ್ಲ ವಸ್ತುಗಳನ್ನು ತ್ಯಜಿಸಲು ಅಥವಾ ಪರಿತ್ಯಕ್ತನಾಗಲು.

ಪ್ರೀತಿಯ ಅದಮ್ಯ ವಿಶ್ವಾಸವನ್ನು ನನಗೆ ನೀಡಿ, ಇದುವೇ ನನ್ನ ಪ್ರಾರ್ಥನೆ; ಮರಣದಲ್ಲಿ ಜೀವನದ ವಿಶ್ವಾಸ, ಸೋಲಿನಲ್ಲಿ ಗೆಲುವಿನ ವಿಶ್ವಾಸ, ಸೌಂದರ್ಯದ ದೌರ್ಬಲ್ಯದಲ್ಲಿ ಅಡಗಿರುವ ಶಕ್ತಿಯ ವಿಶ್ವಾಸ, ಗಾಯಾಳುವನ್ನು ಸ್ವೀಕರಿಸುವ ನೋವಿನ ಘನತೆಯ ವಿಶ್ವಾಸ, ಆದರೆ ಅದನ್ನು ಹಿಂದಿರುಗಿಸಲು ನಿರ್ಲಕ್ಷವಹಿಸುತ್ತವೆ. ಇತೀ ನಿಮ್ಮವನೇ,

ರಬೀಂದ್ರನಾಥ ಟಾಗೋರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News