ಕಾಶ್ಮೀರ ಉಗ್ರರ ದಾಳಿ ಭದ್ರತಾ ವೈಫಲ್ಯಕ್ಕೆ ಸಾಕ್ಷಿ: ಎಸ್‌ಯುಸಿಐ

Update: 2019-02-16 17:04 GMT

ಬೆಂಗಳೂರು, ಫೆ. 16: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿ, ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಎಸ್‌ಯುಸಿಐ ಬೆಂಗಳೂರು ನಗರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿ ಭದ್ರತಾ ವಲಯದಲ್ಲಿ ಅನೇಕ ಕಣ್ಗಾವಲು ವ್ಯವಸ್ಥೆಗಳಿದ್ದರೂ, ಶಸ್ತ್ರಸಜ್ಜಿತ ಭಯೋತ್ಪಾದಕರು ಈ ನರಮೇಧ ನಡೆಸಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಸೇನೆಯ ಸರ್ಪಗಾವಲಿನ ಕಣ್ತಪ್ಪಿಸಿ ಭಯೋತ್ಪಾದಕರು ನುಸುಳಿದ್ದಾದರೂ ಹೇಗೆ? ಪ್ರತಿವರ್ಷ ನಮ್ಮ ರಕ್ಷಣಾ ವ್ಯವಸ್ಥೆಗೆ ಲಕ್ಷಾಂತರ ಕೋಟಿ ರೂ. ವ್ಯಯ ಮಾಡುತ್ತಿದ್ದರೂ, ಇಂತಹ ದಾಳಿಗಳು ನಡೆಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಭದ್ರತಾ ಪಡೆಗಳಿಗೇ ಸರಿಯಾದ ರಕ್ಷಣೆ ಇಲ್ಲದಿದ್ದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂಬ ಆತಂಕ ಮೂಡುತ್ತದೆ. ಮೃತ ಸೈನಿಕರ ಕುಟುಂಬಗಳಿಗೆ ಮತ್ತು ಗಾಯಗೊಂಡ ಯೋಧರಿಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News