ವರ್ಗಾವಣೆ ಬೇಡಿಕೆ ಈಡೇರಿಸುವಂತೆ ಶಿಕ್ಷಕರ ಪಟ್ಟು

Update: 2019-02-16 17:49 GMT

ಬೆಂಗಳೂರು, ಫೆ.16: ಶಿಕ್ಷಕರ ವರ್ಗಾವಣೆ, ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಭಡ್ತಿ ಒಳಗೊಂಡಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಧರಣಿ ನಡೆಸಿದರು.

ಶನಿವಾರ ನಗರದ ನೃಪತುಂಗ ರಸ್ತೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಶಿಕ್ಷಕರು, ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದೆಲ್ಲೆಡೆ 28 ಸಾವಿರದಷ್ಟು ಮುಖ್ಯೋಪಾಧ್ಯಾಯರು, ಭಡ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ 10 ರಿಂದ 30 ವರ್ಷಗಳಲ್ಲಿ ಯಾವುದೇ ರೀತಿಯ ಆರ್ಥಿಕ ಸೌಲಭ್ಯವೇ ದೊರೆತಿಲ್ಲ. ಶಾಲಾ ಆಡಳಿತ ಎಲ್ಲ ಕೆಲಸದ ನಿರ್ವಹಣೆ ಮಾಡುತ್ತಿದ್ದರೂ, ಆರ್ಥಿಕ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ, ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿನ ಶಿಕ್ಷಕರ ವರ್ಗಾವಣೆಯಾಗಬೇಕೆಂದು ಆದೇಶವಾಗಿ ಮೂರು ವರ್ಷ ಕಳೆದರೂ ಆ ಕೆಲಸವಾಗಿಲ್ಲ. ಇದರಿಂದ ಕನಿಷ್ಠ ಮೂಲ ಸೌಕರ್ಯವಿಲ್ಲದ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕರು ಹಾಗೂ ನಗರದಲ್ಲಿರುವ ಶಿಕ್ಷಕರು ಅಲ್ಲೇ ಉಳಿದಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿರುವವರು-ಗ್ರಾಮೀಣಕ್ಕೆ, ಗ್ರಾಮೀಣದಲ್ಲಿರುವವರು ನಗರಕ್ಕೆ ವರ್ಗಾವಣೆಯಾಗಬೇಕೆಂದು ಆಗಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕಾಲದಲ್ಲಿ ಆದೇಶ ಜಾರಿಗೆ ಬಂತು. ಆದರೆ, ಇಲ್ಲಿಯ ತನಕ ಯಾವುದೇ ವರ್ಗಾವಣೆ ಪ್ರಕ್ರಿಯೆ ನಡೆಸಿಲ್ಲ ಎಂದ ಅವರು ರಾಜ್ಯ ಸರಕಾರ ಆದಷ್ಟು ಬೇಗ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನುಕೂಲ ಆಗುವಂತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ, ಶಿಕ್ಷಣ ಇಲಾಖೆ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಶಿಕ್ಷಕರ ಬೇಡಿಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಚಂದ್ರಶೇಖರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News