ಮತದಾರರ ಅನುಕೂಲಕ್ಕೆ ಬಿಬಿಎಂಪಿ ಚುನಾವಣಾ ಆ್ಯಪ್: ಆಯುಕ್ತ ಮಂಜುನಾಥ್ ಪ್ರಸಾದ್

Update: 2019-02-16 17:08 GMT

ಬೆಂಗಳೂರು, ಫೆ.16: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಮತದಾರರಿಗೆ ಅನುಕೂಲವಾಗಲೆಂದು ಬಿಬಿಎಂಪಿ ಚುನಾವಣಾ ಆ್ಯಪ್ ಬಿಡುಗಡೆ ಮಾಡಿದೆ. ಬಿಬಿಎಂಪಿಯಲ್ಲಿ 24 ಗಂಟೆ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ ಸೇರಿ ಒಟ್ಟು 3 ಸಂಸದೀಯ ಕ್ಷೇತ್ರಗಳಿವೆ. ನಗರದ ಪ್ರತಿಯೊಂದು ಲೋಕಸಭಾ ಕ್ಷೇತ್ರವೂ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ. ಮೂರು ಲೋಕಸಭಾ ಕ್ಷೇತ್ರಗಳಿಗೆ 410 ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. 3 ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಒಟ್ಟು 51 ಸಾವಿರ ಸಿಬ್ಬಂದಿ ನೇಮಕ ಮಾಡಲಾಗಿದೆ.

ಒಟ್ಟು 8,514 ಮತಗಟ್ಟೆಗಳಿದ್ದು, ಬೆಂಗಳೂರು ಉತ್ತರದಲ್ಲಿ 27,85,269 ಮತದಾರರು, ಬೆಂಗಳೂರು ಸೆಂಟ್ರಲ್‌ನಲ್ಲಿ 21,49,847 ಮತದಾರರು ಹಾಗೂ ಬೆಂಗಳೂರು ದಕ್ಷಿಣದಲ್ಲಿ 21,66,445 ಮತದಾರರು ಸೇರಿ ಒಟ್ಟು 71,01,561 ಮತದಾರರಿದ್ದಾರೆ. ಮತದಾನದ ನಂತರ ನಗರದಲ್ಲಿ ಮೂರು ಸ್ಟ್ರಾಂಗ್ ರೂಮ್‌ಗಳಲ್ಲಿ ಸುರಕ್ಷಿತವಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯೂ ವಿವಿ ಪ್ಯಾಟ್ ಕಡ್ಡಾಯ ಮಾಡಲಾಗಿದೆ. ಹೆಚ್ಚುವರಿಯಾಗಿ ಶೇ.20 ಇವಿಎಂ ಇರಲಿದೆ ಎಂದು ತಿಳಿಸಿದರು.

ಇದೇ ವೇಳೆ ಏರ್ ಶೋ ಬಗ್ಗೆ ಮಾತನಾಡಿ, ಹೈ ಕೋರ್ಟ್ ಸೂಚನೆ ಮೇರೆಗೆ ಏರ್ ಶೋನ ಜಾಹಿರಾತು ಹಾಕಲು ಬಿಬಿಎಂಪಿ ಅನುಮತಿ ನೀಡಲಾಗಿದೆ. ಏರ್ ಶೋ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಜಾಹೀರಾತು ನೀಡಲು ಅನುಮತಿ ನೀಡಲಾಗಿದೆ. ಆದರೆ, ಕೇವಲ ಬಟ್ಟೆಯ ಹೋರ್ಡಿಂಗ್ಸ್‌ಗಳನ್ನ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News