"ಯುವಜನರಿಗೆ ಶಿಕ್ಷಣ, ಉದ್ಯೋಗ ಖಾತ್ರಿಯಾಗಬೇಕು"

Update: 2019-02-16 17:47 GMT

ಬೆಂಗಳೂರು, ಫೆ.16: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು ಹಾಗೂ ನಿರುದ್ಯೋಗ ಪ್ರಮಾಣ ಕಡಿಮೆಯಾಗುವ ಸಲುವಾಗಿ ಸರಕಾರಗಳು ಯುವಜನರಿಗೆ ಶಿಕ್ಷಣ ಹಾಗೂ ಉದ್ಯೋಗ ಖಾತರಿ ಮಾಡುವಂತಾಗಬೇಕು ಎಂದು ಯುವಜನತೆ ಒಕ್ಕೊರಲಿನಿಂದ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಗಾಂಧೀ ಭವನದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದಲ್ಲಿ ಯುವಜನರ ಹಕ್ಕುಗಳು ಹಾಗೂ ಶಿಕ್ಷಣ, ಉದ್ಯೋಗ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ’ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಯುವಜನರು ಉದ್ಯೋಗ ಹಾಗೂ ಶಿಕ್ಷಣದ ಖಾತರಿ ಕಡೆಗೆ ಸಂಘಟಿತರಾಗಿ ಸಾಗಬೇಕಿದೆ ಎಂದು ಘೋಷಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಫ್‌ಐ ರಾಜ್ಯಕಾರ್ಯದರ್ಶಿ ಗುರುರಾಜ್ ದೇಸಾಯಿ, ಎಲ್ಲರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಲಭ್ಯಗಳು ಸಿಕ್ಕಿದಾಗ ದೇಶ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಸ್ವಾತಂತ್ರ ಪೂರ್ವದಿಂದಲೂ ಇವುಗಳಿಗಾಗಿ ಚಳವಳಿ ನಡೆಯುತ್ತಿದೆ. ಆದರೆ, ಇಂದಿನ ಜನಪ್ರತಿನಿಧಿಗಳಾದ ರಾಹುಲ್‌ಗಾಂಧಿ, ಪ್ರಧಾನಿ ಮೋದಿ ಕೈ ಬೀಸುತ್ತಾ ಕಾಲ ಕಳೆಯುತ್ತಿದ್ದಾರೆ ಎಂದರು.

ದೇಶದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿದ್ದ ಜನತೆ ಮೋದಿ ಹೇಳಿದ ಸುಳ್ಳುಗಳನ್ನು ಸುಲಭವಾಗಿ ನಂಬಿ ಮತ ಹಾಕಿದ್ದಾರೆ. ಆದರೆ, ಚುನಾವಣಾ ಪೂರ್ವದಲ್ಲಿ ಹೇಳಿದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಒಳ್ಳೆ ದಿನಗಳು ಯಾವುದೂ ಬರಲಿಲ್ಲ. ಬದಲಿಗೆ, ನೋಟು ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಸರಕಾರಗಳು ದಿನಗೂಲಿ, ಗುತ್ತಿಗೆ, ಅರೆಗುತ್ತಿಗೆ, ಅತಿಥಿ ಹೆಸರುಗಳಲ್ಲಿ ನೇಮಕಾತಿ ಮಾಡಿಕೊಂಡು ನಿರುದ್ಯೋಗಿಗಳನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ಎನ್‌ಎಸ್‌ಯುಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರಭಿ ದ್ವಿವೇದಿ ಮಾತನಾಡಿ, ಭಾರತದಲ್ಲಿ ಶೇ.50 ರವರೆಗೂ ಯುವ ಸಮುದಾಯವಿದೆ ಎಂದು ಹೇಳಲಾಗುತ್ತದೆ. ಅಲ್ಲದೆ, ದೇಶ ಕಟ್ಟುವಲ್ಲಿ ಯುವ ಸಮುದಾಯದ ಪಾತ್ರ ಅತಿದೊಡ್ಡದಾಗಿದೆ. ಆದರೆ, ಅದೇ ಯುವಜನರನ್ನು ನೀನು ಇನ್ನೂ ಸಣ್ಣವನು ಎಂದು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂದರು.

ದೇಶದಲ್ಲಿ ಯುವ ಸಮುದಾಯಕ್ಕೆ ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಸಬೇಕಾದ ಕರ್ತವ್ಯ ಸರಕಾರಕ್ಕಿದೆ. ಆದರೆ, ಅಧಿಕಾರದಲ್ಲಿರುವ ಸರಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ನುಡಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿ ಎಂದರೆ ಪಕೋಡ ಮಾರುವುದು ಉದ್ಯೋಗವಲ್ಲವೇ ಎನ್ನುತ್ತಾರೆ. ಈ ಕುರಿತು ಬಿಜೆಪಿ ಪಕ್ಷದಲ್ಲಿರುವ ಯುವಜನರೇ ಪ್ರಶ್ನಿಸಬೇಕು ಎಂದ ಅವರು, ಯುವ ಸಮುದಾಯ ರಾಜಕೀಯದಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯತೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ ರೋಹಿತ್ ವೇಮುಲನ ಆತ್ಯಹತ್ಯೆ, ಜೆಎನ್‌ಯುನಲ್ಲಿ ದಾಳಿ ಸೇರಿದಂತೆ ಹಲವಾರು ಕೃತ್ಯಗಳನ್ನು ಬಿಜೆಪಿ, ಆರೆಸ್ಸೆಸ್, ಎಬಿವಿಪಿ ಸಂಘಟನೆಗಳು ಮಾಡುತ್ತಿವೆ ಎಂದು ಆರೋಪಿಸಿದರು.

ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಿಶ್ ಚೌಹಾಣ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯ ಆಧರಿತ ಶಿಕ್ಷಣವನ್ನು ಜಾರಿ ಮಾಡಬೇಕು. ಈ ಮೂಲಕ ಮೂಲಭೂತ ಸಮಸ್ಯೆಯಾದ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆಗೆ ಸಹಕಾರಿಯಾಗುತ್ತದೆ. ದೇಶದಲ್ಲಿ ಗಾಂಧೀಜಿ ಸ್ವಯಂ ಉದ್ಯೋಗದ ಪರಿಕಲ್ಪನೆಯನ್ನು ನೀಡಿದ್ದಾರೆ. ಅದೇ ರೀತಿ ನಾವೂ ಸ್ವಯಂ ಉದ್ಯೋಗದ ಕಡೆಗೆ ಒಲವು ತೋರಬೇಕು. ಅದು ಬಿಟ್ಟು, ಉದ್ಯೋಗ ಸೃಷ್ಟಿಯಾಗಿದೆಯಾ ಎಂದು ಪ್ರಶ್ನಿಸುವುದು ಎಷ್ಟು ಸರಿ ಎಂದು ಪ್ರತಿಕ್ರಿಯಿಸಿದರು.

2019 ರಲ್ಲಿ ದೇಶದಲ್ಲಿ ನಡೆಯಲಿರುವ ಚುನಾವಣೆಯು ಅತ್ಯಂತ ಮಹತ್ವವಾದುದಾಗಿದ್ದು, ಯುವ ಸಮುದಾಯ ಜಾಗೃತರಾಗಿ ಮತ ಚಲಾಯಿಸಬೇಕು. ನಮಗೆ ಉದ್ಯೋಗ, ಆರೋಗ್ಯ, ಶಿಕ್ಷಣದ ಭದ್ರತೆ ಕಲ್ಪಿಸುವ ಸಂಪೂರ್ಣ ಭರವಸೆ ನೀಡುವವರನ್ನು ಆಯ್ಕೆ ಮಾಡಿಕೊಳ್ಳಬೇಕು. ಸುಳ್ಳು ಭಾಷಣಗಳಿಗೆ, ಸುಳ್ಳು ಹೇಳಿಕೆಗಳಿಗೆ ಮರುಳಾಗಬಾರದು

-ಗುರುರಾಜ್ ದೇಸಾಯಿ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ

ಕೇಂದ್ರ ಮತ್ತು ರಾಜ್ಯ ಸರಕಾರಗಳು ಇತ್ತೀಚಿಗೆ ಬಜೆಟ್ ಮಂಡಿಸಿದವು. ಆ ಸಂದರ್ಭದಲ್ಲಿ ವಿವಿಧ ಯುವಜನ ಹಾಗೂ ವಿದ್ಯಾರ್ಥಿ ಸಂಘಟನೆಗಳು ಉದ್ಯೋಗ ಮತ್ತು ಶಿಕ್ಷಣದ ಖಾತ್ರಿಗೊಳಿಸುವ ಸಂಬಂಧ ಒತ್ತಾಯಿಸಿದವು. ಆದರೆ, ಸಂಸತ್ ಹಾಗೂ ವಿಧಾನಸೌಧದಲ್ಲಿರುವ ಜನಪ್ರತಿನಿಧಿಗಳು ಗಡಿ ಕಾಪಾಡುವುದು, ಹಸುಗಳ ರಕ್ಷಣೆಯ ಬಗ್ಗೆ ಚರ್ಚಿಸುತ್ತಾರೆ. ನಾವು ಆಯ್ಕೆ ಮಾಡಿದವರು ನಮ್ಮ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ.

-ಆಶಾ ಝೆಕಾರಿಯಾ, ಎಐಡಿಎಂಎಎಂನ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News